ದಾನಗಳಲ್ಲಿ ಶ್ರೇಷ್ಠ ದಾನ ಕಣ್ಣುದಾನ: ಡಾ. ಕವಿತಾ ಪಾಟೀಲ ಕರೆ
41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಜಿಮ್ಸ್ನಲ್ಲಿ ಜಾಗೃತಿ ಕಾರ್ಯಕ್ರಮ; ವಿದ್ಯಾರ್ಥಿಗಳಿಗೆ ನೇತ್ರದಾನದ ಮಹತ್ವದ ಅರಿವು

ಕಲಬುರಗಿ: ದಾನಗಳಲ್ಲಿ ಕಣ್ಣುದಾನ ಶ್ರೇಷ್ಠ ದಾನವಾಗಿದ್ದು, ಮರಣಾನಂತರ ಕಣ್ಣುದಾನ ಮಾಡುವ ಮೂಲಕ ದೃಷ್ಟಿಹೀನರ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂದು ಜಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಕವಿತಾ ಪಾಟೀಲ ಕರೆ ನೀಡಿದರು.
ನಗರದ ಜಿಮ್ಸ್ ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಆವರಣದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನೇತ್ರದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ನೇತ್ರ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಕವಿತಾ ಪಾಟೀಲ ಮತ್ತು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ರವಿಕಾಂತಿ ಕ್ಯಾತನಾಳ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಕವಿತಾ ಪಾಟೀಲ, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು ಎನ್ನುವವರು ನೇತ್ರದಾನಕ್ಕೆ ಮುಂದಾಗಬೇಕು. ಹುಟ್ಟಿನಿಂದಲೇ ದೃಷ್ಟಿಹೀನರಾಗಿ ಬದುಕುತ್ತಿರುವವರ ಜೀವನದಲ್ಲಿ ಮರಣಾನಂತರ ಕಣ್ಣುದಾನದ ಮೂಲಕ ಬೆಳಕು ಮೂಡಿಸಬಹುದು. ಒಬ್ಬರ ಮರಣದ ನಂತರ ಮತ್ತೊಬ್ಬರ ಬದುಕಿಗೆ ದೃಷ್ಟಿ ನೀಡುವ ಮೂಲಕ ಸಾವು ಸಾರ್ಥಕವಾಗಿಸಿ, ಶಾಶ್ವತ ಬದುಕಿಗೆ ಕಾರಣವಾಗಬಹುದು ಎಂದು ಹೇಳಿದರು.
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನೇತ್ರದಾನದ ಮಹತ್ವವನ್ನು ಅರಿತುಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ರವಿಕಾಂತಿ ಕ್ಯಾತನಾಳ ಮಾತನಾಡಿ, ಮಾನವನ ಕಣ್ಣು ದೇಹದ ಅತ್ಯಂತ ಪ್ರಮುಖ ಹಾಗೂ ಸಂಕೀರ್ಣ ಇಂದ್ರಿಯ ಅಂಗವಾಗಿದೆ. ಕಣ್ಣು ಬೆಳಕನ್ನು ಗ್ರಹಿಸಿ ನಮ್ಮ ಸುತ್ತಲಿನ ಪ್ರಪಂಚದ ಚಿತ್ರವನ್ನು ನಮಗೆ ತೋರಿಸುತ್ತದೆ. ಆದ್ದರಿಂದ ದೃಷ್ಟಿಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನೇತ್ರದಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ದೃಷ್ಟಿಗಾಗಿ’ ಎಂಬ ವಿಷಯದ ಕುರಿತು ಪಾತ್ರಾಭಿನಯ ಹಾಗೂ ಜನಜಾಗೃತಿ ಫಲಕಗಳ ಪ್ರದರ್ಶನ ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೇತ್ರದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ರಾಜೇಶ್ವರಿ ಮಹಾಂತಗೋಳ, ಡಾ. ಶೃತಿ ಬಾಡದ್, ಡಾ. ಜಬೇರ್, ಡಾ. ರಾಜಾಕ್, ಸಂಚಾರಿ ಘಟಕದ ವೈದ್ಯೆ ಡಾ. ಶ್ರೀದೇವಿ, ನೇತ್ರಾಧಿಕಾರಿಗಳಾದ ವೀರಣ್ಣ ಎಸ್. ಕುಂಬಾರ, ಬಾಲಭೀಮ್ ಶಿರಸಗಿ, ಜಿಲ್ಲಾ ಮನೋವಿಜ್ಞಾನಿ ಹಾಗೂ ಸಮಾಲೋಚಕ ಮಂಜುನಾಥ್ ಕಂಬಾಳಿಮಠ, ಜಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.



