‘ಅಪ್ಪಾ, ಆತನಿಗೆ ಶಿಕ್ಷೆ ಕೊಡಿಸಿ’: ತಾಯಿ-ನೆರೆಮನೆಯ ವ್ಯಕ್ತಿಯ ಸಂಬಂಧದ ಆರೋಪ; ಅಜ್ಜಿಯೊಂದಿಗೆ ವಿಷ ಸೇವಿಸಿದ ಬಾಲಕಿ ಸಾವು
13 ವರ್ಷದ ಬಾಲಕಿ ಬರೆದಿದ್ದ ಒಂದು ಪುಟದ ಆತ್ಮಹತ್ಯೆ ಪತ್ರ ಪತ್ತೆ; ಆರೋಪಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲು

ಕೈಥಲ್, ಆ.24: ಹರಿಯಾಣದ ಕೈಥಲ್‌ನಲ್ಲಿ 13 ವರ್ಷದ ಬಾಲಕಿ ಹಾಗೂ ಆಕೆಯ ಅಜ್ಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 22ರಂದು ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 23ರಂದು ಕರ್ನಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕಿ ಆತ್ಮಹತ್ಯೆಗೂ ಮುನ್ನ ತಂದೆಯನ್ನು ಉದ್ದೇಶಿಸಿ ಒಂದು ಪುಟದ ಪತ್ರ ಬರೆದಿದ್ದಳು ಎನ್ನಲಾಗಿದೆ. ತನ್ನ ತಾಯಿಗೆ ಅಭಿಷೇಕ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. “ಅಪ್ಪಾ, ಅಭಿಷೇಕ್ ಮತ್ತು ಅಮ್ಮ ಅಕ್ರಮ ಸಂಬಂಧ ಹೊಂದಿದ್ದಾರೆ. ನಾವು ನಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದೇವೆ. ಆದರೆ ದಯವಿಟ್ಟು ಅಭಿಷೇಕ್‌ಗೆ ಶಿಕ್ಷೆ ಕೊಡಿಸಿ,” ಎಂದು ಬಾಲಕಿ ಪತ್ರದಲ್ಲಿ ಮನವಿ ಮಾಡಿದ್ದಾಳೆ ಎಂದು ವರದಿಯಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೋನಿಯ ನಿವಾಸಿಯಾಗಿರುವ ಅಭಿಷೇಕ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಬಾಲಕಿಯ ತಂದೆ 2012ರಲ್ಲಿ ಸಫಿದೋನ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಪುತ್ರ ಹಾಗೂ 13 ವರ್ಷದ ಪುತ್ರಿ ಇದ್ದರು. ಬಾಲಕಿ ನಗರದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ತಾನು ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಾನು ಮನೆಯಿಂದ ಹೊರಗಿರುವ ಸಂದರ್ಭದಲ್ಲಿ ಆರೋಪಿ ಅಭಿಷೇಕ್ ಮನೆಗೆ ಬಂದು ತನ್ನ ಪತ್ನಿಯನ್ನು ಭೇಟಿಯಾಗುತ್ತಿದ್ದ ಎಂದು ತಂದೆ ಆರೋಪಿಸಿದ್ದಾರೆ. ತಾಯಿ ಮತ್ತು ಅಭಿಷೇಕ್ ನಡುವಿನ ಸಂಬಂಧದ ಬಗ್ಗೆ ಬಾಲಕಿಗೆ ತಿಳಿದಿತ್ತು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಇಬ್ಬರೂ ಬಾಲಕಿಗೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಗಸ್ಟ್ 12ರಂದು ತಾನು ಮನೆಗೆ ಬಂದಾಗ ಅಭಿಷೇಕ್ ತನ್ನ ಪತ್ನಿಯೊಂದಿಗೆ ಇದ್ದುದನ್ನು ಕಂಡಿದ್ದಾಗಿ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ನಂತರ ಅದೇ ದಿನ ಮಹಿಳೆ ತನ್ನ ತವರು ಮನೆಗೆ ತೆರಳಿದ್ದರು. ಆದರೆ ಅಭಿಷೇಕ್ ಬಾಲಕಿಗೆ ಬೆದರಿಕೆ ಹಾಕುವುದನ್ನು ಮುಂದುವರಿಸಿದ್ದರಿಂದ ಬಾಲಕಿ ಹಾಗೂ ಆಕೆಯ ಅಜ್ಜಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿರಂತರ ಕೌಟುಂಬಿಕ ಕಲಹ ಮತ್ತು ಅಭಿಷೇಕ್‌ನ ಬೆದರಿಕೆಗಳಿಂದ ನೊಂದ ಬಾಲಕಿ ಹಾಗೂ ಅಜ್ಜಿ ಆಗಸ್ಟ್ 22ರ ಮಧ್ಯಾಹ್ನ ಹನುಮಾನ್ ವಾಟಿಕಾ ಉದ್ಯಾನವನಕ್ಕೆ ತೆರಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಇಬ್ಬರೂ ವಿಷ ಸೇವಿಸಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಅವರನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಲ್‌ನ ಕಲ್ಪನಾ ಚಾವ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 23ರಂದು ಬಾಲಕಿ ಮೃತಪಟ್ಟಿದ್ದಾಳೆ.
ಅಜ್ಜಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಮೇಶ್ ಚಂದ್ ಅವರು, ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.



