ಜಿಲ್ಲಾಸುದ್ದಿ

ಸ್ಥಗಿತಗೊಂಡಿದ್ದ ಪಿಂಚಣಿ ಮುಂದುವರಿಕೆಗೆ ಸರ್ಕಾರದ ಆದೇಶ: ತಹಸೀಲ್ದಾರ್‌ಗೆ ಸನ್ಮಾನ

ಪಿಂಚಣಿ ಮರುಜಾರಿಗೆ ಆದೇಶ ಹೊರಡಿಸಿದ ಸರ್ಕಾರಕ್ಕೆ ಅಂಗವಿಕಲರ ಸಂಘದಿಂದ ಅಭಿನಂದನೆ

ಚಿತ್ತಾಪುರ, ಆ.22- ಸ್ಥಗಿತಗೊಂಡಿದ್ದ ಸಾಮಾಜಿಕ ಭದ್ರತಾ ಮಾಸಾಶನಗಳಾದ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಮುಂದುವರಿಸಲು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ತಾಲೂಕು ದೈಹಿಕ ಹಾಗೂ ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಮದ್ ಇಬ್ರಾಹಿಂ ಅವರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರನ್ನು ಸನ್ಮಾನಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಮಾಸಾಶನ ಸ್ಥಗಿತಗೊಂಡಿದ್ದರಿಂದ ಅರ್ಹ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಸಂಘದ ವತಿಯಿಂದ ಹಲವು ಬಾರಿ ಮನವಿ ಪತ್ರ ಸಲ್ಲಿಸಿ, ಪ್ರತಿಭಟನೆಗಳನ್ನೂ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ಮಹಮದ್ ಇಬ್ರಾಹಿಂ ತಿಳಿಸಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿದ್ದ ಪಿಂಚಣಿಗೆ ಇದ್ದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ, ಈ ಹಿಂದೆ ತಡೆಹಿಡಿಯಲಾಗಿದ್ದ ಪಿಂಚಣಿಯನ್ನು ಪುನಃ ನೀಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.

ಸರ್ಕಾರದ ಈ ನಿರ್ಧಾರದಿಂದ ಪಿಂಚಣಿ ಸ್ಥಗಿತಗೊಂಡು ಸಂಕಷ್ಟದಲ್ಲಿದ್ದ ಸಾವಿರಾರು ಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ನಿರಂತರವಾಗಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಕಲ್ಯಾಣಿ ಪೂಜಾರಿ, ಸಿದ್ದಣ್ಣ ಬಾಹರಪೇಟ, ಶರಣಪ್ಪ ಸಾತನೂರು, ಮಲ್ಲಿನಾಥ ಪಾಟೀಲ, ಮಹಾದೇವ ಸಾತನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button