ರಾಜಕೀಯ

ವಿಕಸಿತದ ಬದಲು ಭಾರತ ಅವನತಿಯತ್ತ: ಮೋದಿ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕೆಂಡಾಮಂಡಲ

‘ಮೋದಿ ಮಹಾಪ್ರಭುವಿನಂತೆ ಬದುಕುತ್ತಿದ್ದಾರೆ; ದೇಶದ ಪ್ರಧಾನಿ ಸಾಮಾನ್ಯ ಜನರ ಸ್ಥಿತಿಯಲ್ಲಿರಬೇಕು’

ಕಲಬುರಗಿ, ಆ.22- ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೀಗ ಭಾರತವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ ಎಂದು ಖ್ಯಾತ ನಟ ಹಾಗೂ ಪ್ರಗತಿಪರ ಚಿಂತಕ ಪ್ರಕಾಶ್ ರಾಜ್ ಆರೋಪಿಸಿದರು.

ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶನಿವಾರ ನಡೆದ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕುರಿತ ‘ಧೀಮಂತ ನಾಯಕ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಮಹಾಪ್ರಭು ಮೋದಿ ಅವರು ಒಬ್ಬ ರಾಜನಂತೆ ಬದುಕುತ್ತಿದ್ದಾರೆ. ಅವರ ಬಟ್ಟೆ, ವೈಭವದ ಮೆರವಣಿಗೆಗಳು ಅವರಿಗೆ ಬೇಕೇ? ದೇಶದ ಪ್ರಧಾನಿಯನ್ನು ಸಾಮಾನ್ಯ ಜನರ ಮಟ್ಟಿಗೆ ತಂದು ನಿಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಟೀಕಿಸಿದರು.

ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಬಿಜೆಪಿಯ ಸೋಲನ್ನು ಪ್ರಸ್ತಾಪಿಸಿದ ಪ್ರಕಾಶ್ ರಾಜ್, ರಾಮಮಂದಿರ ವ್ಯಾಪ್ತಿಯಲ್ಲಿಯೇ ಬಿಜೆಪಿ ಸೋಲು ಕಂಡಿದೆ ಎಂದರು. ಶಾಸಕರು ಹಾಗೂ ಸಂಸದರನ್ನು ಖರೀದಿಸಲು ರಾಮಮಂದಿರದ ಹಣವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ. ಅವರ ಸುತ್ತಮುತ್ತಲಿರುವ ಪವನ್ ಕಲ್ಯಾಣ್ ಹಾಗೂ ನಿತೀಶ್ ಕುಮಾರ್ ಅವರ ಹೆಗಲ ಮೇಲೆ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ‘ನಾನೇ 400’ ಎಂದು ಹೇಳುತ್ತಿದ್ದವರು ಚುನಾವಣಾ ಫಲಿತಾಂಶದ ಬಳಿಕ ತಮ್ಮ ಗೆಲುವನ್ನು ಕಳೆದುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ತಮ್ಮನ್ನು ಕರಾವಳಿ ಭಾಗಕ್ಕೆ ಕಳುಹಿಸಬೇಕು ಎಂದು ಹೇಳುವ ವಿರೋಧಿಗಳಿಗೆ ತಿರುಗೇಟು ನೀಡಿದರು.

“ನನ್ನನ್ನು ಕರಾವಳಿಗೆ ಕಳುಹಿಸಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಕರಾವಳಿಯ ಜನರು ಅಲ್ಲಿನ ಸಮುದ್ರದ ಮೀನು ತಿಂದು ನನ್ನಂತೆಯೇ ಯೋಚಿಸಿ ಪ್ರಶ್ನೆ ಮಾಡಲು ಆರಂಭಿಸಿದರೆ ನಿಮ್ಮ ಪರಿಸ್ಥಿತಿ ಏನಾಗಬಹುದು?” ಎಂದು ಪ್ರಶ್ನಿಸಿದರು.

‘ಖರ್ಗೆ ಅವರನ್ನು ಶುದ್ಧೀಕರಿಸುವ ಅಗತ್ಯವಿಲ್ಲ’

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿ ಪ್ರದೇಶದಲ್ಲಿ ನಡೆದ ಭಾಷಣದಲ್ಲಿ ಶುದ್ಧೀಕರಣದ ಕುರಿತು ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಖರ್ಗೆ ಅವರನ್ನು ಶುದ್ಧೀಕರಿಸುವ ಅಗತ್ಯವಿಲ್ಲ ಎಂದು ಹೇಳಿದರು.

“ಪ್ರತಿದಿನ ಸುಳ್ಳು ಹೇಳುವವರು ಹಾಗೂ ಅಪಶಬ್ದ ಬಳಸುವವರ ಬಾಯನ್ನು ಮೊದಲು ಗಂಗಾಜಲ, ಗೋಮೂತ್ರದಿಂದ ಶುದ್ಧೀಕರಿಸಬೇಕಾಗಿದೆ” ಎಂದು ವ್ಯಂಗ್ಯವಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಷ್ಟವಿಲ್ಲ ಎಂದರೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರೂ ಇಷ್ಟವಿಲ್ಲ ಎಂದೇ ಅರ್ಥ ಎಂದು ಅವರು ಹೇಳಿದರು. ಸಂವಿಧಾನವನ್ನು ಬ್ರಿಟಿಷರು ಬಂದು ರಚಿಸಿದ್ದಲ್ಲ; ದೇಶದ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಅದು ನಿರ್ಮಾಣವಾಗಿದೆ ಎಂದರು.

ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಾ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನು ಅಳಿಸಲಾಗಿದೆ ಎಂಬ ಆರೋಪಗಳನ್ನೂ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸೋಲಿನ ಭೀತಿಯಿಂದ ದೇಶದಲ್ಲಿ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತಿದೆ ಎಂದು ಟೀಕಿಸಿದರು.

‘ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ’

ವೇದಿಕೆಯಲ್ಲಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್, “ನೀವು ಸದನದಲ್ಲಿ ಹೀಗೆಯೇ ಗುಡುಗುತ್ತಿರಿ. ನಾವೆಲ್ಲರೂ ನಿಮ್ಮ ಜೊತೆಯಲ್ಲಿರುತ್ತೇವೆ. ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ. ದೇಶದ ಜನರೇ ಅವರನ್ನು ಕೆಳಗಿಳಿಸುತ್ತಾರೆ” ಎಂದು ಹೇಳಿದರು.

ಬಳಿಕ ಬಾಬಾಸಾಹೇಬ್ ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಡೆಯುವ ಮುಂದಿನ ಪ್ರಧಾನಿಯನ್ನು ಎಲ್ಲರೂ ಸೇರಿ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.

ಕರ್ನಾಟಕದಲ್ಲಿ ಪ್ರಜೆಗಳೇ ಆಯ್ಕೆ ಮಾಡಿದ ಸರ್ಕಾರವಿದ್ದು, ರಾಜ್ಯದ ಯಾವುದೇ ನಾಗರಿಕನು ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಹೇಳಿದರು. ದೇಶದ ಸಂವಿಧಾನವನ್ನು ಉಳಿಸುವ ಹೊಣೆಗಾರಿಕೆ ಇದೀಗ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿದೆ ಎಂದು ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published. Required fields are marked *

Back to top button