ಜಿಲ್ಲಾಸುದ್ದಿ

ಪಾಲಿಕೆ ನಿವೃತ್ತ ನೌಕರರಿಗೂ ಪಿಂಚಣಿ, ಉಪಧನ ಸೌಲಭ್ಯಕ್ಕೆ ಆಗ್ರಹ: ಆ.24ರಂದು ಕಲಬುರಗಿಯಲ್ಲಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದಿಂದ ಹೋರಾಟ

ಕಲಬುರಗಿ, ಆ.21- ಇತರೆ ಇಲಾಖೆಗಳ ನಿವೃತ್ತ ನೌಕರರಿಗೆ ನೀಡುತ್ತಿರುವಂತೆ ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೂ ಪಿಂಚಣಿ ಸೌಲಭ್ಯಗಳನ್ನು ನಿವೃತ್ತಿಯೊಂದಿಗೆ ನೀಡಬೇಕು ಹಾಗೂ ಉಪಧನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಆ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ನೌಕರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ಜಾರಿಗೊಳಿಸದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಈ ಹಿಂದೆ ಕೂಡ ಪ್ರತಿಭಟನೆ ನಡೆಸಲಾಗಿದೆ. ಆದರೆ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮಹಾನಗರ ಪಾಲಿಕೆಯಲ್ಲಿ 10 ವರ್ಷ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಹತ್ತು ವರ್ಷಗಳ ದಿನಗೂಲಿ ಸೇವಾ ಅವಧಿಯ ವ್ಯತ್ಯಾಸದ ಉಪಧನ ಪಾವತಿಸದೆ, ಸಕ್ರಮಗೊಂಡ ಅವಧಿಯ ಉಪಧನವನ್ನು ಮಾತ್ರ ನೀಡಲಾಗಿದೆ. ಹತ್ತು ವರ್ಷಗಳ ದಿನಗೂಲಿ ಸೇವಾ ಅವಧಿಯ ಉಪಧನವನ್ನು ಇದುವರೆಗೆ ಪಾವತಿಸಿಲ್ಲ ಎಂದು ಅವರು ಆರೋಪಿಸಿದರು.

ಈ ಕುರಿತು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಉಪಧನ ಪಾವತಿ ಸಕ್ಷಮ ಪ್ರಾಧಿಕಾರದ ಮೊರೆ ಹೋಗಲಾಗಿದ್ದು, ವ್ಯತ್ಯಾಸದ ಉಪಧನ ಪಾವತಿಸುವಂತೆ ತೀರ್ಪು ನೀಡಿ ನ್ಯಾಯ ಒದಗಿಸಲಾಗಿದೆ. ಆದರೂ ಕಳೆದ ಎರಡು ವರ್ಷಗಳಿಂದ ಉಪಧನ ಪಾವತಿಸದೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ದಿನಗೂಲಿ ಸೇವಾ ಅವಧಿಯ ಉಪಧನ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಪಾಲಿಸದೆ, ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಪಾಲಿಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. 2022ರ ಏಪ್ರಿಲ್ 20ರಂದು ಜಾರಿಗೊಂಡ ಉಪಧನ ಪಾವತಿ ಕಾಯ್ದೆ ಹಾಗೂ ಕರ್ನಾಟಕ ನಿಯಮಗಳ ಅನ್ವಯ ಉಪಧನ ಪಾವತಿಸಲು ಅವಕಾಶವಿಲ್ಲ ಎಂದು ಹಿಂಬರಹ ನೀಡಿರುವುದು ಕರ್ತವ್ಯ ಲೋಪವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೇವಾ ಸೌಲಭ್ಯಗಳನ್ನು ನೀಡದೆ ಪುನಃ ಪುನಃ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ನಿವೃತ್ತಿ ಸೌಲಭ್ಯಗಳನ್ನು ವಿಳಂಬ ಮಾಡಲಾಗುತ್ತಿದೆ. ಅರ್ಹತಾದಾಯಕ ಸೇವೆ ಮಂಜೂರಾತಿಗಾಗಿ ನಿವೃತ್ತರಾಗಿ 6–7 ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಸೂಕ್ತ ಆದೇಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ ಬಳಿಕ 2025ರಲ್ಲಿ ಅರ್ಹತಾದಾಯಕ ಸೇವಾ ಸೌಲಭ್ಯವನ್ನು ನೀಡಲಾಗಿದೆ ಎಂದು ವೀರಭದ್ರ ಸಿಂಪಿ ತಿಳಿಸಿದರು.

ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ ಕರ್ತವ್ಯ ನಿರ್ವಹಿಸಿದ ಪಾಲಿಕೆ ನೌಕರರಿಗೂ ಇತರೆ ಇಲಾಖೆಗಳ ನಿವೃತ್ತ ನೌಕರರಿಗೆ ನೀಡುತ್ತಿರುವಂತೆ ನಿವೃತ್ತಿಯೊಂದಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ನಿವೃತ್ತ ನೌಕರರ ಕುಟುಂಬಗಳ ಜೀವನೋಪಾಯ ಹಾಗೂ ಇತರ ಸಮಸ್ಯೆಗಳಿಗೆ ನೆರವಾಗುವಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಭಾಷ್ ದೀಕ್ಷಾಂಗಿಕರ್, ಶ್ರೀಕಾಂತ್ ಚಕ್ಕೆ, ಶಿವಾನಂದ ಯಳವಂತಗಿ, ರಿಯಾಜ್ ಅಹ್ಮದ್, ಅಬ್ದುಲ್ ಹಮೀದ್, ಕಲ್ಯಾಣಪ್ಪ ಬಿರಾದಾರ್, ಶಿವಾಜಿ ಜಮಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button