ಶಿಕ್ಷಕರ ನೇಮಕಾತಿ: ಕಲಬುರಗಿಯಲ್ಲಿ ನಾಳೆ ಉಚಿತ ಕಾರ್ಯಾಗಾರ
15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ; ಪಿಎಸ್‌ಟಿಆರ್, ಜಿಪಿಎಸ್‌ಟಿಆರ್, ಎಚ್‌ಎಸ್‌ಟಿಆರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಲಬುರಗಿ, ಆ.21- ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ವತಿಯಿಂದ ಆ.23ರಂದು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ನಿರ್ದೇಶಕ ಎನ್.ಎಸ್. ಹಿರೇಮಠ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಿದ ಬಳಿಕ ರಾಜ್ಯ ಸರ್ಕಾರವು ಬಹುದಿನಗಳ ನಂತರ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ವಿವರಾತ್ಮಕ ಪ್ರಶ್ನೆಪತ್ರಿಕೆಯನ್ನು ಕೈಬಿಟ್ಟು ಬಹು ಆಯ್ಕೆ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಪಿಎಸ್‌ಟಿಆರ್, ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿಷಯವಾರು ನುರಿತ ಉಪನ್ಯಾಸಕರಿಂದ ಪರೀಕ್ಷಾ ಮಾಹಿತಿ, ಅಂಕಗಳ ಹಂಚಿಕೆ, ಪ್ರಶ್ನೆಗಳ ಸ್ವರೂಪ ಸೇರಿದಂತೆ ವಿವಿಧ ಪ್ರಮುಖ ಅಂಶಗಳ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9480397516 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ವತಿಯಿಂದ ಈಗಾಗಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗಿದ್ದು, ಅನೇಕ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕಲ್ಯಾಣ ಕರ್ನಾಟಕ ಭಾಗದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕಗೊಳ್ಳುವ ಉದ್ದೇಶದಿಂದ ವಿಶೇಷ ತರಬೇತಿ ನೀಡಲು ಅಕಾಡೆಮಿ ಮುಂದಾಗಿದೆ ಎಂದು ಎನ್.ಎಸ್. ಹಿರೇಮಠ ಹೇಳಿದರು.



