ಹಾಳು ಬಿದ್ದ ಕಟ್ಟಡದಲ್ಲಿ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ರೂ. ಮೌಲ್ಯದ ಔಷಧಿಗಳು ಪತ್ತೆ
ಔಷಧಿಗಳನ್ನು ರೋಗಿಗಳಿಗೆ ವಿತರಿಸದೆ ನಾಶಪಡಿಸಿದ ಆರೋಪ; ವೈದ್ಯರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಅಫಜಲಪುರ, ಆ.21- ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹಾಗೂ ಅಕ್ರಮಗಳ ಕುರಿತು ಮೇಲಿಂದ ಮೇಲೆ ದೂರುಗಳು ಕೇಳಿಬರುತ್ತಿದ್ದರೂ, ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ನಡುವೆ ರೋಗಿಗಳಿಗೆ ವಿತರಿಸಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಔಷಧಿಗಳು ಹಾಳು ಬಿದ್ದ ಕಟ್ಟಡದಲ್ಲಿ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಡ ರೋಗಿಗಳಿಗೆ ಉಚಿತವಾಗಿ ನೀಡಬೇಕಿದ್ದ ಔಷಧಿಗಳು ಮಣ್ಣಪಾಲಾಗಿದ್ದು, ಅವುಗಳನ್ನು ರೋಗಿಗಳಿಗೆ ವಿತರಿಸದೆ ಹಾಳು ಮಾಡಿದ ಆರೋಪವೂ ಕೇಳಿಬಂದಿದೆ. ಸರ್ಕಾರ ಬಡವರ ಆರೋಗ್ಯ ಸೇವೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ಸರ್ಕಾರಿ ಆಸ್ಪತ್ರೆಯಲ್ಲಿನ ಕೆಲ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಔಷಧಿಗಳು ರೋಗಿಗಳ ಕೈ ಸೇರದೆ ನಷ್ಟವಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರಿ ಔಷಧಿಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿ, ಖಾಸಗಿ ಮೆಡಿಕಲ್ ಶಾಪ್ಗಳಿಗೆ ಚೀಟಿ ಬರೆದುಕೊಡುವ ಮೂಲಕ ಕಮಿಷನ್ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಹ ಕೇಳಿಬರುತ್ತಿವೆ. ಬಡ ರೋಗಿಗಳ ಆರೈಕೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಅಕ್ರಮಗಳು ನಡೆಯುತ್ತಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಲಭ್ಯವಿದ್ದರೂ ಅವುಗಳನ್ನು ರೋಗಿಗಳಿಗೆ ವಿತರಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಸರ್ಕಾರದ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿನ ಔಷಧಿ ಸಂಗ್ರಹ, ವಿತರಣೆ ಹಾಗೂ ಅವುಗಳ ಬಳಕೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



