ಸಮಾಜ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಧ್ವನಿಯಾದ ಧೀಮಂತ ನಾಯಕ: ಚಂದ್ರಿಕಾ ಪರಮೇಶ್ವರ

ಸಾಮಾಜಿಕ ನ್ಯಾಯ, ಭೂ ಸುಧಾರಣೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅರಸು ಕೊಡುಗೆ ಅಪಾರ

ಕಲಬುರಗಿ, ಆ.20: ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಧೀಮಂತ ನಾಯಕರು. ರಾಜ್ಯಕ್ಕೆ, ಅದರಲ್ಲೂ ಹಿಂದುಳಿದ ಜನಾಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಹೇಳಿದರು.

ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಗುರುವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇವರಾಜ ಅರಸು ಅವರು ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ನಾಯಕರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಲವಾದ ಅಡಿಪಾಯ ಹಾಕಿದರು. ಇದೇ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನೂ ರಾಜ್ಯದ ಎರಡನೇ ಡಿ. ದೇವರಾಜ ಅರಸು ಎಂದು ಕರೆಯಬಹುದು ಎಂದು ಚಂದ್ರಿಕಾ ಪರಮೇಶ್ವರ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ನಾಯಕ

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಹಾಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬ ಆಶಯದೊಂದಿಗೆ ಹೋರಾಡಿದ ಮಹಾನ್ ನಾಯಕ ಡಿ. ದೇವರಾಜ ಅರಸು ಎಂದರು.

ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದ ಅರಸು ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಭೂಮಿಯ ಹಕ್ಕನ್ನು ರೈತರಿಗೆ ನೀಡುವಲ್ಲಿ ಹಾಗೂ ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

‘ದೇವರಾಜ ಅರಸು ಎಂದರೆ ಕರ್ನಾಟಕದ ಒಂದು ಯುಗ’

ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ದಯಾನಂದ ಅಗಸರ ಅವರು ವಿಶೇಷ ಉಪನ್ಯಾಸ ನೀಡಿ, ಡಿ. ದೇವರಾಜ ಅರಸು ಅವರು 1915ರ ಆಗಸ್ಟ್ 20ರಂದು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. 1941ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ತಮ್ಮ 25ನೇ ವಯಸ್ಸಿನಲ್ಲಿ ಹುಣಸೂರು ಕ್ಷೇತ್ರದಿಂದ ಮೊದಲ ಚುನಾವಣೆಯಲ್ಲಿ ಜಯಗಳಿಸಿದರು ಎಂದು ವಿವರಿಸಿದರು.

ಸುಮಾರು ಎರಡು ಅವಧಿಗಳಲ್ಲಿ ಒಟ್ಟು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅರಸು ಅವರು ಬಡವರು, ದೀನದಲಿತರು, ಹಿಂದುಳಿದವರು ಹಾಗೂ ಕಡುಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದರು.

ಭೂ ಸುಧಾರಣಾ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿ ತಂದು ‘ಉಳುವವನೇ ಭೂಮಿಯ ಒಡೆಯ’ ಎಂಬ ಆಶಯವನ್ನು ಸಾಕಾರಗೊಳಿಸುವ ಮೂಲಕ ಭೂ ರಹಿತರಿಗೆ ಭೂಮಿ ದೊರೆಯುವಂತೆ ಮಾಡಿದರು. 1973ರಲ್ಲಿ ‘ಮೈಸೂರು ರಾಜ್ಯ’ಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡುವಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಣೆ ಪಡೆದು, ಸಾಕಷ್ಟು ಅಧ್ಯಯನ ಮಾಡಿದ್ದ ಅರಸು ಅವರು ರಾಜ್ಯದ ಆಶಾಕಿರಣವಾಗಿ ಹೊರಹೊಮ್ಮಿದರು. ದೇವರಾಜ ಅರಸು ಎಂಬುದು ಕೇವಲ ಹೆಸರಲ್ಲ, ಅದು ಕರ್ನಾಟಕದ ಒಂದು ಯುಗ. ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಪ್ರಗತಿಗೆ ಅವರು ಹಾಕಿಕೊಟ್ಟ ಅಡಿಪಾಯ ಎಂದೆಂದಿಗೂ ಸ್ಮರಣೀಯ ಎಂದು ಮಾಜಿ ಸಚಿವ ಜೆ.ಎಸ್. ಪಾಟೀಲ್ ಅವರ ಮಾತುಗಳನ್ನು ಸ್ಮರಿಸಿದರು.

ರಾಜ್ಯದ ಅಭಿವೃದ್ಧಿ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ ಅರಸು ಅವರು ನಡೆಸಿದ ಹೋರಾಟ ಮತ್ತು ಜಾರಿಗೆ ತಂದ ಜನಪರ ಸುಧಾರಣೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ದೂರದೃಷ್ಟಿಯ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಅಶೋಕ್ ಡೈಮಂಡ್ ಹಾಗೂ ಡಾ. ಸಿ.ಸಿ. ನಿಂಗಣ್ಣ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅದ್ಧೂರಿ ಭಾವಚಿತ್ರ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್, ಡಿ. ದೇವರಾಜ ಅರಸು ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಜೇನ್ವೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಂಗಮೇಶ್ವರ ಸೇರಿದಂತೆ ಅಧಿಕಾರಿಗಳು ಹಾಗೂ ವಿವಿಧ ಕಲಾ ತಂಡಗಳ ಸದಸ್ಯರು ಭಾಗವಹಿಸಿದ್ದರು.

ವಿವಿಧ ಜಾನಪದ ಕಲಾ ತಂಡಗಳ ಕಲಾ ವೈಭವದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಡಾ. ಎಸ್.ಎಂ. ಪಂಡಿತ್ ರಂಗಮಂದಿರ ತಲುಪಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಂಗಮೇಶ್ವರ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಜಗದೇವಪ್ಪ, ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಜೇನ್ವೇರಿ, ಸಮುದಾಯದ ಮುಖಂಡರಾದ ಕುಮಾರ್ ಯಾದವ್, ಶೇಖರ್ ಸಿಂಗ್, ಅರುಣ್ ಕುಮಾರ್, ಮೈಬೂಬ್ ದರ್ವೇಸಿ, ಮಾಂತೇಶ್, ಶಿವಲಿಂಗಪ್ಪ, ಚಂದ್ರಶೇಖರ್ ಗುಂಡಳ್ಳಿ, ಮಲ್ಲೇಶ್ ಯಾದವ್, ಶ್ರೀಕಾಂತ್ ಬಿರಾದರ್, ವೆಂಕಟೇಶ್ ನೀರಡಗಿ, ನಾಗಪ್ಪ ಎಳವಾರ್, ಜ್ಯೋತಿ ಅಡಕಿ, ಧರ್ಮವೀರ್ ಪಟ್ಟಣ್, ಸ್ವಾಮಿ ದುರ್ಬುರೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ದೇವರಾಜ ಅರಸು ಅಭಿಮಾನಿಗಳ ಬಳಗದ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button