ಅಪರಾಧ

ಉಗ್ರ ಹನುಮಾನ್ ದೇವಸ್ಥಾನ ಸೇರಿ ನಾಲ್ಕು ಮನೆ ಕಳ್ಳತನ ಪ್ರಕರಣ ಪತ್ತೆ

ಗೌಂಡಿ ಬಂಧನ; 22.65 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ: ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ.

ಕಲಬುರಗಿ, ಆ.19: ನಗರದ ಉಗ್ರ ಹನುಮಾನ್ ದೇವಸ್ಥಾನದ ಬೆಳ್ಳಿ ಆಭರಣ ಕಳವು ಹಾಗೂ ನಾಲ್ಕು ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ, ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಒಟ್ಟು 22.65 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಟಿಸಿ ಕಾಲೋನಿಯ ಉಗ್ರ ಹನುಮಾನ್ ಗುಡಿಯ ಬೀಗ ಮುರಿದು ಬೆಳ್ಳಿ ಮುಖವಾಡ, ಬೆಳ್ಳಿ ಚೈನ್ ಸೇರಿದಂತೆ ಒಟ್ಟು 11 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ದೇವಾಲಯದ ಟ್ರಸ್ಟ್ ಉಪಾಧ್ಯಕ್ಷ ಹಣಮಂತರಾಯ ಅವರ ತಂದೆ ಬಾಬುರಾವ್ ಪಾಟೀಲ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಯಿಂದ ಮತ್ತಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.

ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿ ಮೂಲತಃ ಆಳಂದ ತಾಲೂಕಿನ ಧಂಗಾಪುರದ ಗೌಂಡಿ ಕೆಲಸಗಾರ ಈಶ್ವರ ತಂದೆ ಗೋವಿಂದ ಜಾಧವ್ (20) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 2025ರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 10.20 ಲಕ್ಷ ರೂ. ಮೌಲ್ಯದ 69 ಗ್ರಾಂ ಚಿನ್ನಾಭರಣ, 25 ಸಾವಿರ ರೂ. ಮೌಲ್ಯದ 210 ಗ್ರಾಂ ಬೆಳ್ಳಿ ಆಭರಣ, 9 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ 2024ರ ಪ್ರಕರಣಕ್ಕೆ ಸಂಬಂಧಿಸಿದ 1.17 ಲಕ್ಷ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ, 4 ಸಾವಿರ ರೂ. ಮೌಲ್ಯದ 40 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ 75 ಸಾವಿರ ರೂ. ಮೌಲ್ಯದ 750 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಒಟ್ಟು 22.65 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ಬಂಧಿತ ಆರೋಪಿ 2022ರಲ್ಲಿಯೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು. ಗೌಂಡಿ ಕೆಲಸ ಮಾಡುತ್ತಿದ್ದ ಈತ ಶಿಲ್ಪಗಳನ್ನು ಸಹ ಕೆತ್ತುತ್ತಿದ್ದ. ಹಣದ ಅವಶ್ಯಕತೆ ಎದುರಾದಾಗ ಕಳ್ಳತನ ಕೃತ್ಯಗಳಲ್ಲಿ ತೊಡಗುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯೊಂದಿಗೆ ಇನ್ನೂ ಇಬ್ಬರು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಶರಣಪ್ಪ ಎಸ್.ಡಿ. ಹೇಳಿದರು.

ನಗರ ಪೊಲೀಸ್ ಉಪ ಆಯುಕ್ತರಾದ ಶ್ರೀಮತಿ ಶಾಲೂ, ಪ್ರವೀಣ್ ಎಚ್. ನಾಯಕ, ಉಪ ಪೊಲೀಸ್ ಆಯುಕ್ತ ಶರಣಪ್ಪ ಸುಬೇದಾರ್ ಹಾಗೂ ಪಿಐ ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಎಎಸ್‌ಐ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗಳಾದ ಮಲ್ಲನಗೌಡ, ರಾಜಕುಮಾರ್, ಉಮೇಶ್, ಆರೇಶ್, ಶರಣಬಸವ, ಕರಣಕುಮಾರ್, ಬಸವರಾಜ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ನಾಲ್ಕು ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ ಹಾಗೂ ಪ್ರವೀಣ್ ಎಚ್. ನಾಯಕ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button