ಮನರಂಜನೆ

‘ನಾನು ಹೆಮ್ಮೆಯ ಅಂಧಭಕ್ತ’: ಭಾರತ ಬದಲಾಗುತ್ತಿರುವುದನ್ನು ಪ್ರೀತಿಸುತ್ತೇನೆ ಎಂದ ಇಶಾ ಕೊಪ್ಪಿಕರ್

ಯಾವುದೇ ರಾಜಕೀಯ ಪಕ್ಷದ ಪರವಲ್ಲ; ದೇಶದ ಮೇಲಿನ ನನ್ನ ಭಕ್ತಿ ಎಂದ ನಟಿ

ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊ ಮೂಲಕ ತಾವು ಹೆಮ್ಮೆಯ ‘ಅಂಧಭಕ್ತ’ ಎಂದು ಹೇಳಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಭಕ್ತಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ಮೇಲಲ್ಲ, ಬದಲಾಗಿ ಭಾರತದ ಮೇಲಿನ ಪ್ರೀತಿ ಮತ್ತು ದೇಶದ ಪ್ರಗತಿಯ ಬಯಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ದೇಶವನ್ನು ಪ್ರೀತಿಸಿ ಅದು ಪ್ರಗತಿ ಹೊಂದಬೇಕು ಎಂದು ಬಯಸುವುದೇ ಭಕ್ತಿಯಾಗಿದ್ದರೆ, ಹೌದು, ನಾನು ಹೆಮ್ಮೆಯ ಭಕ್ತೆ, ಅಂಧಭಕ್ತೆ” ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ. ಆದರೆ ತಮ್ಮ ‘ಅಂಧಭಕ್ತಿ’ ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ ಎಂದಿರುವ ಅವರು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಹಾಗೂ ಅವುಗಳೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಹಕ್ಕು ತಮಗಿದೆ. ಅದೇ ಸಮಯದಲ್ಲಿ ದೇಶವನ್ನು ಹೃದಯಪೂರ್ವಕವಾಗಿ ಪ್ರೀತಿಸಬಹುದು ಎಂದು ಹೇಳಿದ್ದಾರೆ.

ಭಾರತ ತಮ್ಮ ಮನೆ ಇದ್ದಂತೆ ಎಂದು ಹೇಳಿರುವ ಇಶಾ, ತಾವು ದೇಶದಲ್ಲೇ ದುಡಿದು ಜೀವನೋಪಾಯ ಗಳಿಸುತ್ತಿದ್ದು, ಹಲವು ಅವಕಾಶಗಳನ್ನು ಪಡೆದಿದ್ದೇನೆ. ಹೀಗಾಗಿ ದೇಶದ ಬಗ್ಗೆ ಹೆಮ್ಮೆಪಡಲು ತಮಗೆ ಯಾವುದೇ ಮುಜುಗರವಿಲ್ಲ ಎಂದಿದ್ದಾರೆ. ತಾವು ಎಲ್ಲೇ ವಾಸಿಸುತ್ತಿದ್ದರೂ ಆ ಸ್ಥಳವನ್ನು ಪ್ರೀತಿಸಿ, ಗೌರವಿಸಿ, ಅದರ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.

ದೇಶ ನಮಗೆ ಏನು ನೀಡಿದೆ ಎಂದು ಸದಾ ಪ್ರಶ್ನಿಸುವ ಬದಲು, ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಪೋಷಕರು ಮತ್ತು ಮಕ್ಕಳ ಉದಾಹರಣೆಯನ್ನು ನೀಡಿದ ಇಶಾ, ಕೆಲವರು ತಮ್ಮ ಪೋಷಕರು ತಮಗಾಗಿ ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುದನ್ನು ಲೆಕ್ಕ ಹಾಕುತ್ತಾ ಜೀವನ ಕಳೆಯುತ್ತಾರೆ. ಇನ್ನು ಕೆಲವರು ತಮಗೆ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ತಮ್ಮ ಜೀವನವನ್ನೂ, ಪೋಷಕರ ಜೀವನವನ್ನೂ ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ ಎಂದು ವಿವರಿಸಿದ್ದಾರೆ.

“ಭಾರತ ಬದಲಾಗುತ್ತಿದೆ. ಹೊಸ ಭಾರತ ನಿರ್ಮಾಣಕ್ಕೆ ನೆರವಾಗಲು ನಮ್ಮ ಆಲೋಚನೆಗಳೂ ಬದಲಾಗಬೇಕು” ಎಂದು ಇಶಾ ಹೇಳಿದ್ದಾರೆ. ತಮ್ಮನ್ನು ಭಕ್ತ, ಅಂಧಭಕ್ತ ಅಥವಾ ರಾಷ್ಟ್ರೀಯವಾದಿ ಎಂದು ಏನೇ ಕರೆದರೂ ತಾವು ಭಾರತೀಯಳು, ಭಾರತವನ್ನು ಪ್ರೀತಿಸುತ್ತೇನೆ ಮತ್ತು ಭಾರತದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.

“ನಾನು ಕುರುಡಾಗಿ ಅಲ್ಲ, ಹೆಮ್ಮೆಯಿಂದ, ಉತ್ಸಾಹದಿಂದ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ನನ್ನ ದೇಶವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶದೊಂದಿಗೆ ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿರುವ ಇಶಾ, ತಪ್ಪು ಎನಿಸಿದ ವಿಚಾರಗಳನ್ನು ಪ್ರಶ್ನಿಸುತ್ತಲೇ, ಸರಿಯಾದ ವಿಚಾರಗಳನ್ನು ಮೆಚ್ಚಿಕೊಂಡು ದೇಶವನ್ನು ಎಲ್ಲಕ್ಕಿಂತ ಮೇಲಾಗಿ ಇರಿಸಬಹುದು ಎಂದು ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button