ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಖಂಡಿಸಿ ಡಿಎಸ್ಎಸ್ ಧರಣಿ: ಡಾ. ಲಕ್ಷ್ಮಣ ದಸ್ತಿ ಭಾಗಿ
ಸ್ಥಳ ಶುದ್ಧೀಕರಣ ದಲಿತ ಸಮುದಾಯಕ್ಕೆ ಮಾಡಿದ ಅವಮಾನ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕಲಬುರಗಿ, ಆ.20: ಉತ್ತರ ಖಂಡದ ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಬಳಿಕ ಕೋಮುವಾದಿಗಳು ಹೋಮ-ಹವನ ನಡೆಸಿ ಸ್ಥಳ ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.
ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ, ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ್ ಬಡದಾಳ್, ಸೂರ್ಯಕಾಂತ್ ಆಜಾದಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಸ್ಥಳ ಶುದ್ಧೀಕರಣ ಮಾಡಿರುವುದು ಕೇವಲ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ. ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಇಂತಹ ಕೋಮುವಾದಿ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸುಳ್ಳಿನ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ದೇಶದ ಜನರ ಮುಂದೆ ಧ್ವನಿ ಎತ್ತುತ್ತಿದ್ದಾರೆ. ಈ ಕಾರಣಕ್ಕಾಗಿ ಉತ್ತರ ಖಂಡದ ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಖರ್ಗೆ ಅವರು ಸಭೆ ನಡೆಸಿದ ಸ್ಥಳವನ್ನು ಹೋಮ-ಹವನ ಮಾಡಿ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಶುದ್ಧೀಕರಣ ಕಾರ್ಯಕ್ರಮವು ಬಿಜೆಪಿ ಪಕ್ಷದ ಕುತಂತ್ರದಿಂದ ನಡೆದಿದೆ ಎಂದು ಅವರು ದೂರಿದರು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿ, ಬಿಜೆಪಿ ಪಕ್ಷದವರು ಇದರಲ್ಲಿ ಭಾಗಿಯಾಗಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಆದರೆ ಬಿಜೆಪಿ ಮುಖಂಡ ಗಿರೀಶ್ಚಂದ್ರ ಪಾಂಡೆ ಅವರ ನೇತೃತ್ವದಲ್ಲಿ ಹೋಮ-ಹವನ ನಡೆದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಿಜೆಪಿ ಮತ್ತು ಆರ್ಎಸ್ಎಸ್ನ ಮನುವಾದಿ, ಜಾತಿವಾದಿ ಮನೋಭಾವ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಿರಿಯ ನಾಯಕರು ಭಾಷಣ ಮಾಡಿದ ಸ್ಥಳವನ್ನೇ ಶುದ್ಧೀಕರಣ ಮಾಡಿರುವುದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಘಟನೆ ದೇಶದ ತಲೆ ತಗ್ಗಿಸುವಂತೆ ಮಾಡಿದ್ದು, ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಬಿಜೆಪಿ ಮತ್ತು ಆರ್ಎಸ್ಎಸ್ಗೆ ಮಾನವೀಯತೆ ಹಾಗೂ ಮಾನವ ಮರ್ಯಾದೆ ಇದ್ದರೆ ದೇಶದ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.



