ಮನರಂಜನೆ

‘ಸೆಲೆಬ್ರಿಟಿ ಮಾಸ್ಟರ್‌ಚೆಫ್ ತಮಿಳ್’ ನಿರೂಪಕಿಯಾಗಿ ಸಮಂತಾ ರುತ್ ಪ್ರಭು

ಸೋನಿ ವಿಝಾ ಮತ್ತು ಸೋನಿ ಲಿವ್‌ನಲ್ಲಿ ಶೀಘ್ರದಲ್ಲೇ ಪ್ರಸಾರ; ತಮಿಳು ಚಿತ್ರರಂಗದ ಖ್ಯಾತ ತಾರೆಯರು ಅಡುಗೆ ಮನೆಯತ್ತ

ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಇದೀಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಜನಪ್ರಿಯ ಅಡುಗೆ ರಿಯಾಲಿಟಿ ಶೋ ‘ಸೆಲೆಬ್ರಿಟಿ ಮಾಸ್ಟರ್‌ಚೆಫ್ ತಮಿಳ್’ ಕಾರ್ಯಕ್ರಮವನ್ನು ಸಮಂತಾ ನಿರೂಪಿಸಲಿದ್ದು, ಈ ಕುರಿತು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಶನಿವಾರ ಅಧಿಕೃತವಾಗಿ ಘೋಷಿಸಿದೆ.

ತಮಿಳು ಪ್ರೇಕ್ಷಕರಿಗಾಗಿ ರೂಪಿಸಲಾಗಿರುವ ಈ ಕಾರ್ಯಕ್ರಮ ಸೋನಿ ವಿಝಾ ಹಾಗೂ ಸೋನಿ ಲಿವ್ ವೇದಿಕೆಗಳಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮದ ಮೂಲಕ ತಮಿಳು ಮನರಂಜನಾ ಕ್ಷೇತ್ರದ ಹಲವು ಜನಪ್ರಿಯ ಮುಖಗಳು ಇದೇ ಮೊದಲ ಬಾರಿಗೆ ಸೆಟ್‌ನಿಂದ ಅಡುಗೆ ಮನೆಗೆ ಕಾಲಿಡಲಿದ್ದಾರೆ.

ಅಡುಗೆ ಮನೆಯಲ್ಲಿ ತಮಿಳು ತಾರೆಯರ ಪೈಪೋಟಿ

‘ಸೆಲೆಬ್ರಿಟಿ ಮಾಸ್ಟರ್‌ಚೆಫ್ ತಮಿಳ್’ನಲ್ಲಿ ತಮಿಳು ಚಿತ್ರರಂಗ ಹಾಗೂ ಮನರಂಜನಾ ಕ್ಷೇತ್ರದ ಪ್ರಮುಖ ಸೆಲೆಬ್ರಿಟಿಗಳು ವಿವಿಧ ಸವಾಲಿನ ಅಡುಗೆ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅನಿರೀಕ್ಷಿತ ತಿರುವುಗಳು, ಕಠಿಣ ಸವಾಲುಗಳು ಹಾಗೂ ಸಮಯದ ಒತ್ತಡದ ನಡುವೆ ರುಚಿಕರವಾದ ಖಾದ್ಯಗಳನ್ನು ಸಿದ್ಧಪಡಿಸಿ ಗೆಲುವಿಗಾಗಿ ಸೆಲೆಬ್ರಿಟಿಗಳು ಪೈಪೋಟಿ ನಡೆಸಲಿದ್ದಾರೆ.

ಕಾರ್ಯಕ್ರಮದ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ಸಮಂತಾ ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮದ ಉತ್ಸಾಹವನ್ನು ಪರಿಚಯಿಸಿದ್ದಾರೆ. ಚಿತ್ರರಂಗದಲ್ಲಿ ‘ಕಟ್’ ನಂತರ ದೃಶ್ಯ ಮುಗಿಯುತ್ತದೆ. ಆದರೆ ಅಡುಗೆಮನೆಯಲ್ಲಿ ‘ಕಟ್’ ನಂತರವೇ ನಿಜವಾದ ಆಟ ಆರಂಭವಾಗುತ್ತದೆ ಎಂಬ ಅರ್ಥದ ಮಾತುಗಳ ಮೂಲಕ ಅವರು ಕಾರ್ಯಕ್ರಮದ ವಿಶೇಷತೆಯನ್ನು ಹೇಳಿದ್ದಾರೆ.

‘ಈ ಕಾರ್ಯಕ್ರಮಕ್ಕಾಗಿ ಕಾತರದಿಂದಿದ್ದೇನೆ’ ಎಂದ ಸಮಂತಾ

ಕಾರ್ಯಕ್ರಮದ ನಿರೂಪಕಿಯಾಗಿರುವ ಬಗ್ಗೆ ಮಾತನಾಡಿರುವ ಸಮಂತಾ ರುತ್ ಪ್ರಭು, ‘ಸೆಲೆಬ್ರಿಟಿ ಮಾಸ್ಟರ್‌ಚೆಫ್ ತಮಿಳ್’ ತಮ್ಮ ಹಿಂದಿನ ಯಾವುದೇ ಕೆಲಸಕ್ಕಿಂತ ಭಿನ್ನವಾದ ಅನುಭವ ನೀಡಲಿದೆ ಎಂದು ಹೇಳಿದ್ದಾರೆ.

ಆಹಾರವು ಜನರನ್ನು ಒಗ್ಗೂಡಿಸುವ, ನೆನಪುಗಳನ್ನು ಸೃಷ್ಟಿಸುವ ಹಾಗೂ ಕ್ಯಾಮೆರಾಗಳ ಮುಂದೆ ಸಾಮಾನ್ಯವಾಗಿ ಕಾಣಿಸದ ವ್ಯಕ್ತಿತ್ವದ ಮತ್ತೊಂದು ಮುಖವನ್ನು ಹೊರತರುವ ಶಕ್ತಿಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳು ಚಿತ್ರರಂಗದ ನೆಚ್ಚಿನ ಸೆಲೆಬ್ರಿಟಿಗಳು ಅಡುಗೆಮನೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವುದು, ತಪ್ಪುಗಳಿಂದ ಕಲಿಯುವುದು ಹಾಗೂ ಗೆಲುವಿಗಾಗಿ ನಿರೀಕ್ಷೆಗಿಂತ ಹೆಚ್ಚಿನ ಉತ್ಸಾಹದಿಂದ ಸ್ಪರ್ಧಿಸುವುದನ್ನು ನೋಡಲು ತಾವು ಉತ್ಸುಕರಾಗಿರುವುದಾಗಿ ಸಮಂತಾ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳ ಹೆಸರನ್ನು ಈಗಲೇ ಬಹಿರಂಗಪಡಿಸದೆ ಕುತೂಹಲವನ್ನು ಉಳಿಸಿಕೊಳ್ಳಲಾಗಿದೆ.

‘ಸೆಲೆಬ್ರಿಟಿ ಮಾಸ್ಟರ್‌ಚೆಫ್ ತಮಿಳ್’ ಶೀಘ್ರದಲ್ಲೇ ಸೋನಿ ವಿಝಾ ಮತ್ತು ಸೋನಿ ಲಿವ್ನಲ್ಲಿ ಪ್ರಸಾರವಾಗಲಿದ್ದು, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳು ಲಭ್ಯವಾಗಲಿವೆ.

Related Articles

Leave a Reply

Your email address will not be published. Required fields are marked *

Back to top button