ಜಿಲ್ಲಾಸುದ್ದಿ

ಕಳೆದುಹೋದ ₹22 ಸಾವಿರ ಹಾಗೂ ಮೊಬೈಲ್ ಇದ್ದ ಬ್ಯಾಗ್ ಮಹಿಳೆಗೆ ಮರಳಿಸಿದ ಆಟೋ ಚಾಲಕ

ಪ್ರಾಮಾಣಿಕತೆ ಮೆರೆದ ನಿಜಾಮ್‌ಗೆ ಬ್ರಹ್ಮಪುರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಿಂದ ಸನ್ಮಾನ

ಕಲಬುರಗಿ: ನಗರದ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ಮಹಿಳೆಯೊಬ್ಬರು ಮೊಬೈಲ್ ಹಾಗೂ ₹22 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದರು. ರಸ್ತೆಯಲ್ಲಿ ಸಿಕ್ಕಿದ್ದ ಬ್ಯಾಗ್ ಅನ್ನು ಆಟೋ ಚಾಲಕನೊಬ್ಬ ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ತಂದು ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ಸಿಕ್ಕ ವ್ಯಾನಿಟಿ ಬ್ಯಾಗ್‌ನಲ್ಲಿ ಮೊಬೈಲ್ ಹಾಗೂ ₹22,000 ನಗದು ಇರುವುದನ್ನು ಗಮನಿಸಿದ ಆಟೋ ಚಾಲಕ ನಿಜಾಮ್ ತಂದೆ ಅಹಮದ್, ಕಲಬುರಗಿ ಅವರು ಯಾವುದೇ ಸ್ವಾರ್ಥವಿಲ್ಲದೆ ಬ್ಯಾಗ್ ಅನ್ನು ಬ್ರಹ್ಮಪುರ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಹಸ್ತಾಂತರಿಸಿದರು.

ಬಳಿಕ ಬ್ಯಾಗ್‌ನ್ನು ಕಳೆದುಕೊಂಡಿದ್ದ ಮಹಿಳೆಯನ್ನು ಪತ್ತೆಹಚ್ಚಿ, ಅವರ ಮೊಬೈಲ್ ಹಾಗೂ ₹22 ಸಾವಿರ ನಗದು ಸೇರಿದಂತೆ ವ್ಯಾನಿಟಿ ಬ್ಯಾಗ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯಲು ನೆರವಾದ ಆಟೋ ಚಾಲಕ ನಿಜಾಮ್ ಅವರ ಪ್ರಾಮಾಣಿಕತೆ ಮತ್ತು ಮಾನವೀಯ ಗುಣವನ್ನು ಪೊಲೀಸ್ ಇಲಾಖೆ ಶ್ಲಾಘಿಸಿತು. ಈ ಸಂದರ್ಭದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಮಹಾಂತೇಶ್ ಪಾಟೀಲ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ನಿಜಾಮ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ನಿಜಾಮ್ ಅವರು ತೋರಿದ ಪ್ರಾಮಾಣಿಕತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಳೆದು ಸಿಕ್ಕ ವಸ್ತುಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button