ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ: ನ್ಯಾಯಮೂರ್ತಿ ಆರ್. ದೇವದಾಸ
ಶೀಘ್ರ ನ್ಯಾಯದಾನಕ್ಕೆ ವಕೀಲರು ಸಹಕರಿಸಲಿ; ಡಿಜಿಟಲ್ ತಂತ್ರಜ್ಞಾನದಿಂದ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಜನಸ್ನೇಹಿಯಾಗಲಿ

ಕಲಬುರಗಿ, ಆ.15: ನ್ಯಾಯಾಂಗ ರಂಗದಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆ ರೂಪಿಸಲು ಬಾರ್ ಮತ್ತು ಬೆಂಚ್ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ನ್ಯಾಯಾಂಗದ ಮೇಲಿರುವ ಸಾರ್ವಜನಿಕರ ಅಚಲ ನಂಬಿಕೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಹಿರಿಯ ನ್ಯಾಯಮೂರ್ತಿ ಆರ್. ದೇವದಾಸ ಹೇಳಿದರು.
ನಗರದ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಆವರಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ವಿಳಂಬವಾದ ನ್ಯಾಯವು ನ್ಯಾಯ ನಿರಾಕರಣೆಗೆ ಸಮಾನ ಎಂದು ಹೇಳಿದ ನ್ಯಾಯಮೂರ್ತಿ ದೇವದಾಸ, ಕಲ್ಯಾಣ ಕರ್ನಾಟಕದ ಕಡುಬಡವರು, ರೈತರು ಹಾಗೂ ಶೋಷಿತರು ತಮ್ಮ ಹಕ್ಕುಗಳಿಗಾಗಿ ವರ್ಷಗಟ್ಟಲೆ ಕಾಯುವಂತಾಗಬಾರದು. ವಕೀಲರು ಅನಗತ್ಯವಾಗಿ ಪ್ರಕರಣಗಳನ್ನು ಮುಂದೂಡುವುದನ್ನು ಕಡಿಮೆ ಮಾಡಿ, ಶೀಘ್ರ ನ್ಯಾಯದಾನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಸಣ್ಣಪುಟ್ಟ ಜಗಳ ಹಾಗೂ ವಿವಾದಗಳನ್ನು ನ್ಯಾಯಾಲಯಕ್ಕೆ ತರುವ ಬದಲು ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ. ಇದರಿಂದ ಸಮಾಜದಲ್ಲಿ ಸೌಹಾರ್ದತೆ ಹೆಚ್ಚುವುದರ ಜೊತೆಗೆ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ಕೂಡ ಕಡಿಮೆಯಾಗಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ನೆಲದಿಂದ ನ್ಯಾಯದ ಧ್ವನಿ ಎಂದಿಗೂ ಕುಗ್ಗಬಾರದು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು. 2047ರಲ್ಲಿ ದೇಶದ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಘಟನೆಗಳನ್ನು ಸ್ಮರಿಸಿದ ಅವರು, ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆ 150 ವರ್ಷಗಳನ್ನು ಪೂರೈಸಿರುವುದನ್ನು ಉಲ್ಲೇಖಿಸಿದರು. ಈ ವರ್ಷದ ಸ್ವಾತಂತ್ರ್ಯೋತ್ಸವವು ‘ವಿಕಸಿತ ಭಾರತಕ್ಕಾಗಿ ಯುವಶಕ್ತಿ’ ಎಂಬ ಪ್ರಮುಖ ಸಂಕಲ್ಪದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಡಿಜಿಟಲ್ ತಂತ್ರಜ್ಞಾನಕ್ಕೆ ಆದ್ಯತೆ
ಆಧುನಿಕ ಯುಗದಲ್ಲಿ ನ್ಯಾಯಾಲಯಗಳು ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗಿವೆ. ಈ-ಕೋರ್ಟ್‌ಗಳು, ವರ್ಚುವಲ್ ವಿಚಾರಣೆ ಹಾಗೂ ತ್ವರಿತ ಈ-ಫೈಲಿಂಗ್‌ನಂತಹ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದ ಕಕ್ಷಿದಾರರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿಯೇ ತೀರ್ಪು ನೀಡಲು ಹಾಗೂ ಕಲಾಪ ನಡೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿ ದೇವದಾಸ ಹೇಳಿದರು.
2026ರ ಜೂನ್ 1ರಿಂದ ಜಾರಿಗೆ ಬಂದ ಹಾರ್ಡ್ ಬೋರ್ಡ್ ಫೈಲಿಂಗ್ ಪ್ರಕ್ರಿಯೆಯನ್ನು ಮೂರು ಪೀಠಗಳ ಪೈಕಿ ಕಲಬುರಗಿ ಪೀಠದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಬುರಗಿ ಪೀಠ ಆರಂಭಗೊಂಡ 2008ರ ಜುಲೈ 7ರಿಂದ 2026ರ ಆಗಸ್ಟ್ 14ರವರೆಗೆ ಒಟ್ಟು 1,78,631 ಪ್ರಕರಣಗಳು ದಾಖಲಾಗಿದ್ದು, 1,54,873 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಕೀಲರು ಮತ್ತು ನ್ಯಾಯಾಧೀಶರು ನ್ಯಾಯದಾನದ ರಥದ ಎರಡು ಚಕ್ರಗಳಿದ್ದಂತೆ. ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್‌ಗಳ ಸಕ್ರಿಯ ಬಳಕೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ನೈಜ ದೇಶಭಕ್ತಿಯಿಂದ ವಿಕಸಿತ ಭಾರತ ಸಾಧ್ಯ
ನೈಜ ದೇಶಭಕ್ತಿಯು ಕೇವಲ ಗಡಿಯಲ್ಲಿ ನಿಂತು ದೇಶಕ್ಕಾಗಿ ಹೋರಾಡುವುದಕ್ಕೆ ಸೀಮಿತವಲ್ಲ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಕಾನೂನನ್ನು ಗೌರವಿಸುವುದು, ಪರಿಸರವನ್ನು ಸ್ವಚ್ಛವಾಗಿಡುವುದು ಹಾಗೂ ಮಹಿಳೆಯರನ್ನು ಗೌರವಿಸುವುದೂ ಸಹ ದೇಶಭಕ್ತಿಯ ಪ್ರಮುಖ ರೂಪಗಳಾಗಿವೆ ಎಂದು ನ್ಯಾಯಮೂರ್ತಿ ಆರ್. ದೇವದಾಸ ಹೇಳಿದರು.
ದ.ರಾ. ಬೇಂದ್ರೆಯವರ ಕವನದ ಸಾಲುಗಳನ್ನು ಸ್ಮರಿಸಿದ ಅವರು, ರಾಷ್ಟ್ರಧ್ವಜವು ಹಿಮಾಲಯದಿಂದ ದಕ್ಷಿಣದ ಜಲರಾಶಿಯವರೆಗೆ ಸದಾ ಹೆಮ್ಮೆಯಿಂದ ಹಾರಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ಗೌರವ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಟಿ.ಎನ್. ಇನವಳ್ಳಿ, ಬೃಂಗೇಶ ಎಂ., ಅಪರ ಮಹಾವಿಲೇಖನಾಧಿಕಾರಿ ಬಸವರಾಜ ಚೇಂಗಟಿ, ಅಪರ ವಿಲೇಖನಾಧಿಕಾರಿ (ನ್ಯಾಯಾಂಗ) ಕುಮಾರ ಡಿ.ಕೆ., ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ, ಉಚ್ಚ ನ್ಯಾಯಾಲಯ ಘಟಕದ ಉಪಾಧ್ಯಕ್ಷ ಅನಂತ ಜಹಾಗೀರದಾರ, ಸಂಘದ ಪ್ರಧಾನ ಕಾರ್ಯದರ್ಶಿ ಗೌರೀಶ ಎಸ್. ಕಾಶಂಪೂರ, ಸರ್ಕಾರಿ ವಕೀಲರು, ಕಿರಿಯ ವಕೀಲರು, ಉಚ್ಚ ನ್ಯಾಯಾಲಯದ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.



