ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ದುಂಡುಮೇಜಿನ ಸಭೆಯ ಸರ್ವಾನುಮತದ ಒತ್ತಾಯ
ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ

ಕಲಬುರಗಿ, ಆ.14: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಮಗ್ರ ಹಾಗೂ ಸಮತೋಲನದ ಅಭಿವೃದ್ಧಿಗಾಗಿ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ, ದೀರ್ಘಕಾಲೀನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಡೆದ ದುಂಡುಮೇಜಿನ ಸಭೆಯಲ್ಲಿ ಸರ್ವಾನುಮತದ ಒತ್ತಾಯ ವ್ಯಕ್ತವಾಯಿತು.
ನಗರದ ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಪರಿಣತ ತಜ್ಞರು, ಚಿಂತಕರು, ಬುದ್ಧಿಜೀವಿಗಳು, ಅಭಿವೃದ್ಧಿಪರ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಪ್ರದೇಶದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ನಿರ್ವಹಿಸಿದರು. ಸಭೆಯಲ್ಲಿ ನಂಜುಂಡಪ್ಪ ವರದಿಯ ಮಾನದಂಡಗಳು ಹಾಗೂ ಸೂಚ್ಯಂಕಗಳು, ಗೋವಿಂದರಾವ್ ಸಮಿತಿ ವರದಿಯ ಅಭಿವೃದ್ಧಿ ಸೂಚ್ಯಂಕಗಳು ಮತ್ತು ಶಿಫಾರಸುಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಪರಿಣತ ತಜ್ಞರು, ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ₹42 ಸಾವಿರ ಕೋಟಿ ಮೀಸಲಿಡಲಾಗಿದೆ ಎಂಬ ಅಂಶವನ್ನು ಪ್ರಶ್ನಿಸಿದರು. ಪ್ರದೇಶದ ಅಭಿವೃದ್ಧಿಗೆ ಯಾವುದೇ ಸ್ಪಷ್ಟ ಮಾನದಂಡ ಕಂಡುಬರುತ್ತಿಲ್ಲ. ಗೋವಿಂದರಾವ್ ಸಮಿತಿ ವರದಿಯಲ್ಲಿಯೂ ಸ್ಪಷ್ಟತೆ ಇಲ್ಲದಿರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಮುಂದಿನ 5ರಿಂದ 10 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು. ಕೇವಲ ಸರ್ಕಾರದ ಸಾಮಾನ್ಯ ಬಜೆಟ್ನ ಯೋಜನೆಗಳಿಗೆ ಸೀಮಿತವಾಗದೆ ನಿರ್ಲಕ್ಷ್ಯಕ್ಕೊಳಗಾದ ಕ್ಷೇತ್ರಗಳು, ಗ್ರಾಮಗಳು ಹಾಗೂ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸಭೆ ಒತ್ತಾಯಿಸಿತು.
ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ರೂಪಿಸಿ, ಈ ಭಾಗದಿಂದ ಜನರು ವಲಸೆ ಹೋಗುವುದನ್ನು ತಡೆಯಬೇಕು. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ, ಕೃಷಿ ನೀತಿ ಹಾಗೂ ಶೈಕ್ಷಣಿಕ ನೀತಿ ರೂಪಿಸಬೇಕು. ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ರಾಯಚೂರಿನಲ್ಲಿ ನಡೆಯುತ್ತಿರುವ ಏಮ್ಸ್ ಬೇಡಿಕೆಯ ಹೋರಾಟಕ್ಕೆ ಬೆಂಬಲ ನೀಡುವುದರೊಂದಿಗೆ ಏಳು ಜಿಲ್ಲೆಗಳ ಹೋರಾಟಗಳನ್ನು ಒಗ್ಗೂಡಿಸಿ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ. ಏಳು ಜಿಲ್ಲೆಗಳ ಸಚಿವರು ಹಾಗೂ ಶಾಸಕರು ಒಗ್ಗಟ್ಟಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವಂತೆ ಸರ್ವಪಕ್ಷಗಳ ನಿಯೋಗವನ್ನು ರಚಿಸಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಶೇಷ ಕೈಗಾರಿಕಾ ನೀತಿ ಜಾರಿಗೆ ತರುವುದರ ಜೊತೆಗೆ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಪ್ರತ್ಯೇಕ ನೀತಿಗಳನ್ನು ರೂಪಿಸಬೇಕು. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೆಳಹಂತದಿಂದಲೇ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಗೋವಿಂದರಾವ್ ಸಮಿತಿಯ ಶಿಫಾರಸುಗಳಂತೆ ಮಾನವ ಅಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸಮಿತಿ ಸೂಚಿಸಿರುವ ಅಭಿವೃದ್ಧಿ ಸೂಚ್ಯಂಕಗಳ ಆಧಾರದ ಮೇಲೆ ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಭೆ ಆಗ್ರಹಿಸಿತು.
ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ರೈಲ್ವೆ ವಿಭಾಗೀಯ ಕೇಂದ್ರ ಕಚೇರಿ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಸಂವಿಧಾನದ 371(ಜೆ) ಕಲಂನಡಿ ರಾಜ್ಯದ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಕಲ್ಯಾಣ ಕರ್ನಾಟಕದ ನೌಕರರಿಗೆ ಬಡ್ತಿ ಸೇರಿದಂತೆ 371(ಜೆ)ಯ ಸೌಲಭ್ಯಗಳು ಪರಿಣಾಮಕಾರಿಯಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆ ನಿರ್ಣಯಿಸಿತು.
ಪ್ರತಿ ವರ್ಷ ಜನವರಿ 1ರಂದು 371(ಜೆ) ಕಲಂ ಉತ್ಸವ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರು, ಮಂಡಳಿ ಸದಸ್ಯರು ಹಾಗೂ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ಜಾಗೃತಿ ಸಮಿತಿಗಳನ್ನು ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಸಭೆಯಲ್ಲಿ ಪ್ರೊ. ಧನರಾಜ್, ರಾಯಚೂರಿನ ಏಮ್ಸ್ ಹೋರಾಟ ಸಮಿತಿ ಅಧ್ಯಕ್ಷ ಡಾ. ಬಸವರಾಜ ಕಳಸ, ಎಚ್ಕೆಸಿಸಿ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಪ್ರೊ. ಬಸವರಾಜ ಕುಮನುರ್, ಪ್ರೊ. ಆರ್.ಕೆ. ಹೂಡಗಿ, ನಿವೃತ್ತ ಕುಲಪತಿ ಪ್ರತಾಪಸಿಂಗ್ ತಿವಾರಿ ಸೇರಿದಂತೆ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ಇತರ ಜಿಲ್ಲೆಗಳ ಅನೇಕ ತಜ್ಞರು ಮತ್ತು ಹೋರಾಟಗಾರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಭೆಯಲ್ಲಿ ನೂರಾರು ಮಂದಿ ಭಾಗವಹಿಸಿ ಕಲ್ಯಾಣ ಕರ್ನಾಟಕದ ಸಮಗ್ರ, ಸಮತೋಲನ ಹಾಗೂ ದೀರ್ಘಕಾಲೀನ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಸಂಘಟಿತ ಒತ್ತಡ ತರುವ ಅಗತ್ಯವನ್ನು ಪ್ರತಿಪಾದಿಸಿದರು.



