ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಸಿ, ಗಣಿತ ಶಿಕ್ಷಕರ ಪರಿಗಣನೆಗೆ ಎಐಡಿವೈಒ ಆಗ್ರಹ
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡುವಂತೆ ಒತ್ತಾಯ

ಕಲಬುರಗಿ, ಆ.14: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ನೇಮಕಾತಿಯಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ ವಿಷಯದ ಶಿಕ್ಷಕರನ್ನು ಪರಿಗಣಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಎಸ್.ಎಚ್. ಆಗ್ರಹಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿದರು. ಹಲವು ದಿನಗಳ ಹೋರಾಟದ ಬಳಿಕ ಯುವಜನರ ಒತ್ತಾಯಕ್ಕೆ ಸ್ಪಂದಿಸಿ ಈ ಅಧಿಸೂಚನೆ ಹೊರಬಂದಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ನಿರಂತರ ಹೋರಾಟಗಳ ಫಲವಾಗಿ ಹೊರಡಿಸಿದ ಸರ್ಕಾರಿ ಆದೇಶದಂತೆ, ಡಿಸೆಂಬರ್ 31, 2027ರವರೆಗೆ ನಡೆಯುವ ನೇರ ನೇಮಕಾತಿಗಳಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡುವ ನಿರ್ಧಾರ ಕೈಗೊಂಡಿದೆ. ಆದರೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಈ ವಯೋಮಿತಿ ಸಡಿಲಿಕೆಯನ್ನು ಜಾರಿಗೊಳಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ನಿರ್ಧಾರದಂತೆ ಎಲ್ಲ ನೇರ ನೇಮಕಾತಿಗಳಲ್ಲೂ ಐದು ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, 11 ವರ್ಷಗಳ ಬಳಿಕ ನಾಲ್ಕು ಸಾವಿರಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಗಣಿತ ವಿಷಯದ ಶಿಕ್ಷಕರನ್ನು ಸೇರಿಸಿಲ್ಲ. ಇದರಿಂದ ಬಿ.ಎಡ್ನಲ್ಲಿ ಗಣಿತ ವಿಷಯವನ್ನು ಅಧ್ಯಯನ ಮಾಡಿ ಪ್ರೌಢಶಾಲಾ ಶಿಕ್ಷಕರಾಗಲು ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎಂದು ಜಗನ್ನಾಥ ಎಸ್.ಎಚ್. ಹೇಳಿದರು.
ಆದ್ದರಿಂದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ ವಿಷಯದ ಶಿಕ್ಷಕರನ್ನೂ ಸೇರಿಸಬೇಕು. ಶಿಕ್ಷಕರ ಕೊರತೆಯನ್ನು ನಿವಾರಿಸುವುದರ ಜೊತೆಗೆ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ ಹಾದಿಮನಿ, ಶಿಕ್ಷಕರಾದ ಬಸವಂತರಾಯ, ಬಸವರಾಜ್ ಆರ್. ಬುಗ್ಗಿ, ಶಿವರಾಜ್ ನಾಗನೂರ, ವರುಣ್ ದೇಸಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



