ರಾಜಕೀಯ

ಗುರುಬ ಸಮುದಾಯದ ಸಂಘಟನಾ ವಿಚಾರದಲ್ಲಿ ವಿವಾದ: ಗುರುನಾಥ ಪೂಜಾರಿ ಬೆಂಬಲಕ್ಕೆ ಬಂಡಾಯ

ಭಗವಂತರಾಯಗೌಡ ಅಧ್ಯಕ್ಷರ ನೇಮಕ ಅಕ್ರಮ; ಏಕಪಕ್ಷೀಯ ನಿರ್ಧಾರ ಒಪ್ಪುವುದಿಲ್ಲ: ತಿಪ್ಪಣ್ಣ ಪೂಜಾರಿ

ಕಲಬುರಗಿ, ಆ.14: ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೂತನವಾಗಿ ಭಗವಂತರಾಯಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅಕ್ರಮವಾಗಿದೆ ಎಂದು ಆರೋಪಿಸಿರುವ ಸಂಘದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ತಿಪ್ಪಣ್ಣ ಪೂಜಾರಿ, ಹಿಂದಿನ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಅವರನ್ನು ಏಕಪಕ್ಷೀಯವಾಗಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುನಾಥ ಪೂಜಾರಿ ಅವರು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ನಾಲ್ಕು ವರ್ಷಗಳ ಕಾಲ ಕುರುಬರ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದು, ಸಂಘದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸದ್ಯ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಸ್ಪಷ್ಟತೆ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕೋರ್‌ ಸಮಿತಿಯ ಗಮನಕ್ಕೆ ತರದೆ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಜಿಲ್ಲೆಯಲ್ಲಿ ಒಟ್ಟು 88 ಮಂದಿ ಚುನಾಯಿತ ಪ್ರತಿನಿಧಿಗಳಿದ್ದು, ಅವರ ಗಮನಕ್ಕೂ ತರದೆ ಬೆಂಗಳೂರಿನ ರಾಜ್ಯ ಕೇಂದ್ರ ಸಂಘದವರು ಏಕಪಕ್ಷೀಯವಾಗಿ ಭಗವಂತರಾಯಗೌಡ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ ಎಂದು ತಿಪ್ಪಣ್ಣ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಈ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ ಕಳೆದ 12ರಂದು ಜಿಲ್ಲೆಯ ನಿರ್ದೇಶಕರು ಹಾಗೂ ಪದಾಧಿಕಾರಿಗಳು ತುರ್ತು ಸಭೆ ನಡೆಸಿ, ಭಗವಂತರಾಯಗೌಡ ಅವರ ಅಧ್ಯಕ್ಷರ ನೇಮಕಾತಿ ಆದೇಶವನ್ನು ಸರ್ವಾನುಮತದಿಂದ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ತಾಲೂಕು ಅಧ್ಯಕ್ಷರು, ಸಮುದಾಯದ ಹಿರಿಯ ಮುಖಂಡರ ಸಭೆ ನಡೆಸಿ ದಿನಾಂಕ ನಿಗದಿಪಡಿಸಿ, ಸಂಘದ ನಿಯಮಾವಳಿಯಂತೆ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ಚುನಾವಣೆ ನಡೆಯುವವರೆಗೂ ಜಿಲ್ಲಾ ಹಿರಿಯ ಉಪಾಧ್ಯಕ್ಷರು ಸಂಘದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲು ಜಿಲ್ಲೆಯ ಎಲ್ಲ ನಿರ್ದೇಶಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಧಾರವನ್ನು ಜಿಲ್ಲಾ ಘಟಕ ಒಪ್ಪುವುದಿಲ್ಲ ಎಂದು ತಿಪ್ಪಣ್ಣ ಪೂಜಾರಿ ಸ್ಪಷ್ಟಪಡಿಸಿದರು.

ಜಿಲ್ಲಾ ನಿರ್ದೇಶಕ ತಿಪ್ಪಣ್ಣ ಪೂಜಾರಿ ಮಾತನಾಡಿ, ಗುರುನಾಥ ಪೂಜಾರಿ ಅವರ ರಾಜೀನಾಮೆ ಪತ್ರವನ್ನು ಭಗವಂತರಾಯಗೌಡ ಅವರ ಪುತ್ರ ತೆಗೆದುಕೊಂಡು ಹೋಗಿದ್ದು, ಅದನ್ನು ರಾಜ್ಯಾಧ್ಯಕ್ಷರಿಗೆ ನೀಡಿ, ತಮ್ಮನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಮಾಡಿದರು. ಈ ಏಕಪಕ್ಷೀಯ ನಿರ್ಧಾರಕ್ಕೆ ಜಿಲ್ಲಾ ಘಟಕದ ಒಪ್ಪಿಗೆ ಇಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರೇಪ್ಪಗೌಡ ಯಡ್ರಾಮಿ, ದೇವೇಂದ್ರಪ್ಪ ಕಾಳಗಿ, ರಾಜು ಮುತಕೋಡ, ಟಿ.ಕೆ. ಪೂಜಾರಿ, ಶಿವಾಜಿ ಎಸ್. ಪಟ್ಟಣ, ಭೀಮಾಶಂಕರ ಜನಿವಾರ, ಕುಪೇಂದ್ರ ಬರಗಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button