ಆರೋಗ್ಯಶಿಕ್ಷಣ

ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ: ಪ್ರೊ. ಅಷ್ಫಾಕ್ ಅಹ್ಮದ್

ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೆ ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಒತ್ತಡರಹಿತ ಜೀವನ ಅಗತ್ಯ

ಕಲಬುರಗಿ, ಆ.14: ಪ್ರತಿಯೊಬ್ಬರೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ. ಅಷ್ಫಾಕ್ ಅಹ್ಮದ್ ಹೇಳಿದರು.

ಕೆಬಿಎನ್ ವಿಶ್ವವಿದ್ಯಾಲಯದ ವೈದ್ಯಕೀಯ ನಿಕಾಯದ ಬಯೋಕೆಮಿಸ್ಟ್ರಿ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಿಎಂಜಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳು ನಮ್ಮ ಜೀವನಶೈಲಿಯೊಂದಿಗೆ ನೇರ ಸಂಬಂಧ ಹೊಂದಿವೆ. ಇಂತಹ ರೋಗಗಳಿಂದ ಪ್ರತಿವರ್ಷ 45ರಿಂದ 50 ಮಿಲಿಯನ್ ಜನರು ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ವಾಯುಮಾಲಿನ್ಯದಿಂದಲೂ ಪ್ರತಿವರ್ಷ 7ರಿಂದ 8 ಮಿಲಿಯನ್ ಜನರು ಮೃತಪಟ್ಟಿದ್ದಾರೆ. ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರಗಳಾಗಿದ್ದು, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯದಲ್ಲಿ ಈವರೆಗೆ 50ಕ್ಕೂ ಹೆಚ್ಚು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದ್ದು, ಅವುಗಳ ವರದಿಗಳ ಆಧಾರದ ಮೇಲೆ ಮುಂದಿನ ಅಧ್ಯಯನ ಹಾಗೂ ಸಂಶೋಧನೆ ನಡೆಸಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯಗಳಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಸಮಾಜದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಬೇಕು ಎಂದು ಪ್ರೊ. ಅಷ್ಫಾಕ್ ಅಹ್ಮದ್ ತಿಳಿಸಿದರು.

ಅಕಾಡೆಮಿಕ್ಸ್ ಡೀನ್ ಡಾ. ಜಮಾ ಮೂಸವಿ ಮಾತನಾಡಿ, ಶೇಕಡಾ 80ರಷ್ಟು ಸಾಂಕ್ರಾಮಿಕವಲ್ಲದ ರೋಗಗಳು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಕಂಡುಬರುತ್ತಿವೆ. ಕೋವಿಡ್ ಅವಧಿಯಲ್ಲಿ ಇಂತಹ ರೋಗಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ದೈಹಿಕ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಮದ್ಯಪಾನ ತ್ಯಜಿಸುವುದು ಉತ್ತಮ ಆರೋಗ್ಯಕ್ಕೆ ಅಗತ್ಯ ಎಂದು ಹೇಳಿದರು.

ಕೆಬಿಎನ್ ವಿಶ್ವವಿದ್ಯಾಲಯವು ಬಹುಶಿಸ್ತೀಯ ವಿಶ್ವವಿದ್ಯಾಲಯವಾಗಿದ್ದು, ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆಹಾರ ಮತ್ತು ಪೋಷಣೆ, ಸಮಾಜಶಾಸ್ತ್ರ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಸಿಎಂಜಿ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯದಿಂದ ಪ್ರೋತ್ಸಾಹವಿದೆ ಎಂದು ತಿಳಿಸಿ, ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ವೈದ್ಯಕೀಯ ಡೀನ್ ಡಾ. ಗುರುಪ್ರಸಾದ್ ಮಾತನಾಡಿ, ಉತ್ತಮ ಆಹಾರ, ಸಮರ್ಪಕ ನಿದ್ರೆ ಹಾಗೂ ಒತ್ತಡರಹಿತ ಜೀವನಶೈಲಿ ಆರೋಗ್ಯಕರ ಬದುಕಿಗೆ ನಾಂದಿಯಾಗಿದೆ ಎಂದರು.

ಕುಲಸಚಿವ ಮೀರ್ ವಿಲಾಯತ್ ಅಲಿ ಮಾತನಾಡಿ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಬೊಜ್ಜು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದ್ದು, ಇವು ದೇಶಕ್ಕೆ ದೊಡ್ಡ ಸವಾಲಾಗಿವೆ. ಜಾಗೃತಿ ಮತ್ತು ಪ್ರಾಯೋಗಿಕ ಜ್ಞಾನವೇ ಇವುಗಳ ನಿಯಂತ್ರಣಕ್ಕೆ ಪ್ರಮುಖ ಪರಿಹಾರ. ವಿವಿಧ ವಿಭಾಗಗಳು ಒಗ್ಗೂಡಿ ಅನುಭವ ಹಂಚಿಕೊಂಡು ಹೊಸ ವಿಧಾನಗಳನ್ನು ಕಂಡುಕೊಳ್ಳುವ ಮೂಲಕ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ನಿಕಾಯದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 500 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಗೋಷ್ಠಿಗಳು ಹಾಗೂ ವಿಚಾರ ವಿನಿಮಯ ಕಾರ್ಯಕ್ರಮಗಳು ನಡೆದವು.

ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ. ಸಬಾ ನಾರಾಯಣ್ ಸ್ವಾಗತಿಸಿದರು. ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಶಹನಾಜ್ ವಂದಿಸಿದರು. ಟ್ಯೂಟರ್ ಡಾ. ಮೆಹಜಬೀನ್ ಕಾರ್ಯಕ್ರಮ ನಿರೂಪಿಸಿದರು.

ಆಸ್ಪತ್ರೆಯ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಅನೂಪ್ ದೇಸಾಯಿ, ಡಾ. ಸನಾ ನಿಜಾಮಿ, ಡಾ. ಸಿದ್ದೇಶ್ ಸಿರವಾರ, ಡಾ. ಸುನೀಲ್ ದೇಶಮುಖ್, ಡಾ. ಬಿಲಾಲ್, ಡಾ. ಫಯಿಮ್, ಡಾ. ತಾಜಾಮುಲ್ಲಾ, ಡಾ. ಖುಸ್ರೋ ಅನ್ಸಾರಿ, ಡಾ. ಲತೀಫ್, ಡಾ. ಆಶಾ, ಡಾ. ಶಿಫಾ, ಡಾ. ಅಸ್ರಾ, ಡಾ. ಪೂರ್ಣಿಮಾ, ಡಾ. ಹಫಾ, ಡಾ. ಮಿರ್ಜಾ ಶರೀಫ್ ಬೇಗ್, ಡಾ. ಸಾದಿಯಾ, ಡಾ. ಮಜ್, ಡಾ. ಆಯೇಷಾ, ಡಾ. ಆಫ್ಶನ್, ಡಾ. ಸ್ವಾತಿ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button