ಕಲಬುರಗಿ ಕೋಟೆ ಪುನಶ್ಚೇತನಕ್ಕೆ ₹20 ಕೋಟಿ ಯೋಜನೆ: ಕೇಂದ್ರ ಸಚಿವರಿಗೆ ಸಂಸದ ರಾಧಾಕೃಷ್ಣ ಮನವಿ

ಕಲಬುರಗಿ, ಆ.10: ನಗರದ ಐತಿಹಾಸಿಕ ಕಲಬುರಗಿ ಕೋಟೆಯ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ರೂಪಿಸಲಾಗಿರುವ ₹20 ಕೋಟಿ ವೆಚ್ಚದ ಯೋಜನೆಗೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆಗ್ರಹಿಸಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಅಮೃತ್ 2.0 ಯೋಜನೆಯಡಿ ಕಲಬುರಗಿ ಕೋಟೆಯ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, ಕೋಟೆಯ ಕಂದಕದ ಜಲಮೂಲವನ್ನು ಪುನರುಜ್ಜೀವನಗೊಳಿಸುವುದು, ಉದ್ಯಾನವನ ಅಭಿವೃದ್ಧಿ, ಭೂದೃಶ್ಯ ನಿರ್ಮಾಣ, ಸಸಿ ನೆಡುವಿಕೆ ಸೇರಿದಂತೆ ವಿವಿಧ ಪರಿಸರ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಐತಿಹಾಸಿಕ ಸ್ಮಾರಕವನ್ನು ಸಂರಕ್ಷಿಸುವುದರ ಜೊತೆಗೆ ಕೋಟೆಯನ್ನು ‘ಹಸಿರು ಪಾರಂಪರಿಕ ತಾಣ’ವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಂಸದರು ಕೇಂದ್ರ ಸಚಿವರಿಗೆ ವಿವರಿಸಿದರು.
ಯೋಜನೆಯ ಪ್ರಸ್ತಾವನೆ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಕೇಂದ್ರ ಕಚೇರಿಯಲ್ಲಿ ಬಾಕಿ ಉಳಿದಿದೆ. ಹೀಗಾಗಿ ಕೇಂದ್ರ ಸಂಸ್ಕೃತಿ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಎಎಸ್‌ಐ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಯೋಜನೆಗೆ ಶೀಘ್ರ ಆಡಳಿತಾತ್ಮಕ ಮಂಜೂರಾತಿ ದೊರಕಿಸಿಕೊಡಬೇಕು ಎಂದು ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.
ಕಲಬುರಗಿಯ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವುದರೊಂದಿಗೆ ಕೋಟೆಯ ಸುತ್ತಮುತ್ತಲಿನ ಪರಿಸರವನ್ನು ಸುಧಾರಿಸಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಯೋಜನೆ ಸಹಕಾರಿಯಾಗಲಿದೆ. ಕೋಟೆ ಪುನಶ್ಚೇತನದಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವುದರ ಜೊತೆಗೆ ಪ್ರಾದೇಶಿಕ ಅಭಿವೃದ್ಧಿಗೂ ಮತ್ತಷ್ಟು ಬಲ ಸಿಗಲಿದೆ ಎಂಬ ಆಶಾಭಾವವನ್ನು ಸಂಸದರು ವ್ಯಕ್ತಪಡಿಸಿದರು.



