ಅಪರಾಧ

ಒಂದೇ ರಾತ್ರಿ ಎಂಟು ರೈತರ ಪಂಪ್‌ಸೆಟ್ ಕೇಬಲ್ ಕಳವು; ಗ್ರಾಮಕ್ಕೆ ನೀರು ಪೂರೈಸುವ ಕೇಬಲ್‌ಗೂ ಕಳ್ಳರ ಕೈಚಳಕ

ಗಡಿಲಿಂಗದಹಳ್ಳಿಯಲ್ಲಿ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್ ಕೇಬಲ್ ಕಳವು

ಚಿಂಚೋಳಿ, ಆ.9: ತಾಲ್ಲೂಕಿನ ಗಡಿಲಿಂಗದಹಳ್ಳಿ ಗ್ರಾಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಕೇಬಲ್‌ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಒಂದೇ ರಾತ್ರಿ ಸುಮಾರು ಏಳೆಂಟು ರೈತರ ಪಂಪ್‌ಸೆಟ್‌ಗಳ ಕೇಬಲ್‌ಗಳನ್ನು ಕಳವು ಮಾಡಲಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ರಾಜಕುಮಾರ್ ಜಾಧವ್, ಸಂತೋಷ ಚೆನ್ನೂರ್, ರೇವಣಸಿದ್ದ ಚೆನ್ನೂರ್ ಸೇರಿದಂತೆ ಏಳೆಂಟು ಮಂದಿ ರೈತರ ಪಂಪ್‌ಸೆಟ್ ಕೇಬಲ್‌ಗಳನ್ನು ಕಳ್ಳರು ಕತ್ತರಿಸಿ ಕಳವು ಮಾಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್‌ಸೆಟ್‌ನ ಕೇಬಲ್‌ನ್ನೂ ಕಳ್ಳರು ಕದ್ದೊಯ್ದಿದ್ದಾರೆ.

ಒಂದೇ ರಾತ್ರಿ ಕಳ್ಳರು ಗ್ರಾಮದಲ್ಲಿ ಕೈಚಳಕ ತೋರಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ರೈತರ ಪಂಪ್‌ಸೆಟ್‌ಗಳ ಕೇಬಲ್ ಕಳವಾಗಿರುವುದರಿಂದ ನೀರಾವರಿ ಚಟುವಟಿಕೆಗಳಿಗೂ ತೊಂದರೆಯಾಗುವ ಆತಂಕ ಎದುರಾಗಿದೆ.

ಗ್ರಾಮದಲ್ಲಿ ಈ ಹಿಂದೆಯೂ ಇದೇ ರೀತಿಯ ಕೇಬಲ್ ಕಳವು ಪ್ರಕರಣಗಳು ನಡೆದಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪದೇಪದೇ ಕೇಬಲ್ ಕಳವು ನಡೆಯುತ್ತಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಕಳವಿನಿಂದ ಕಂಗೆಟ್ಟಿದ್ದಾರೆ.

ಕೇಬಲ್ ಕಳವು ಮಾಡುತ್ತಿರುವ ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಬೇಕು. ಗ್ರಾಮದಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button