ಜಿಲ್ಲಾಸುದ್ದಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ 3.94 ಲಕ್ಷಕ್ಕೂ ಅಧಿಕ ರೈತರ ನೋಂದಣಿ: ರೈತರಿಗೆ ಖೂಬಾ ಅಭಿನಂದನೆ

ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಗೆ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ; ಅಧಿಕಾರಿಗಳ ಸೇವೆಯನ್ನೂ ಶ್ಲಾಘಿಸಿದ ಮಾಜಿ ಸಚಿವ ಭಗವಂತ ಖೂಬಾ

ಬೀದರ್, ಆ.4: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 3.94 ಲಕ್ಷಕ್ಕೂ ಅಧಿಕ ರೈತರು ತಮ್ಮ ಬೆಳೆಗಳನ್ನು ನೋಂದಾಯಿಸಿಕೊಂಡಿರುವುದು ಸಂತಸದ ಸಂಗತಿ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ರೈತಪರ ಯೋಜನೆಗಳಿಗೆ ಜಿಲ್ಲೆಯ ರೈತರು ಉತ್ತಮ ಸ್ಪಂದನೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಾಧನೆಗಾಗಿ ಜಿಲ್ಲೆಯ ರೈತರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಯೋಜನೆ ಆರಂಭವಾದ ದಿನದಿಂದಲೂ ರೈತರು ಇದರ ಪ್ರಯೋಜನ ಪಡೆಯುತ್ತಿದ್ದು, ಬೆಳೆ ನಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಪ್ರಮುಖ ಯೋಜನೆಯಾಗಿ ಇದು ರೂಪುಗೊಂಡಿದೆ. ತಮ್ಮ ಅಧಿಕಾರಾವಧಿಯಲ್ಲಿ ರೈತರಲ್ಲಿ ಯೋಜನೆ ಕುರಿತು ವ್ಯಾಪಕ ಜಾಗೃತಿ ಮೂಡಿಸಿದ್ದ ಪರಿಣಾಮವೇ ಇಂದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ಖೂಬಾ ಹೇಳಿದರು.

ಈ ವರ್ಷ ದಾಖಲೆ ಪ್ರಮಾಣದಲ್ಲಿ ನೋಂದಣಿ ನಡೆದಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ಎಲ್ಲ ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

ಫಸಲ್ ಬಿಮಾ ಯೋಜನೆ ಕುರಿತು ಕೆಲವು ರಾಜಕೀಯ ನಾಯಕರು ತಪ್ಪು ಮಾಹಿತಿ ಹರಡಲು ಪ್ರಯತ್ನಿಸಿದರೂ, ರೈತರು ಸತ್ಯವನ್ನು ಅರಿತು ಯೋಜನೆಯ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ವಿಶೇಷವಾಗಿ ಭಾಲ್ಕಿ ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಂಡಿರುವುದು ಯೋಜನೆಗೆ ಜನರಿಂದ ದೊರೆತಿರುವ ಬೆಂಬಲದ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಯೋಜನೆಯಡಿ ನೋಂದಾಯಿತ ರೈತರಿಗೆ ಯಾವುದೇ ರೀತಿಯ ನೆರವು ಅಥವಾ ಪರಿಹಾರದ ಅಗತ್ಯ ಎದುರಾದರೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಬ್ಯಾಂಕುಗಳು ಹಾಗೂ ಸಂಬಂಧಿತ ವಿಮಾ ಕಂಪನಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ತ್ವರಿತ ಸೇವೆ ಒದಗಿಸಬೇಕು ಎಂದು ಖೂಬಾ ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button