ಕಿಶೋರ್ ಕುಮಾರ್ ಜನ್ಮದಿನ ನಿಮಿತ್ತ ಸಂಗೀತ ಸಂಜೆ: ಸದಾಬಹಾರ್ ಗೀತೆಗಳಿಗೆ ಮನಸೋತ ಸಂಗೀತಾಸಕ್ತರು
97ನೇ ಜನ್ಮದಿನ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕಿಶೋರ್-ಲತಾ ಹಾಡುಗಳಿಗೆ ಹೆಜ್ಜೆ ಹಾಕಿದ ಪ್ರೇಕ್ಷಕರು

ಕಲಬುರಗಿ, ಆ.4: ಖ್ಯಾತ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ನಗರದ ಕನ್ನಡ ಭವನದಲ್ಲಿ ನಾದಪ್ರಿಯ ಸಾಂಸ್ಕೃತಿಕ ಗೆಳೆಯರ ಬಳಗದಿಂದ ಆಯೋಜಿಸಿದ್ದ ‘ಏಕ್ ಶಾಮ್ ಕಿಶೋರ್ ದಾ ಕೆ ನಾಮ್’ ಸಂಗೀತ ಸಂಜೆ ಕಾರ್ಯಕ್ರಮ ಸಂಗೀತಾಸಕ್ತರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ವೈಸ್ ಆಫ್ ರಮೇಶ್ ಜೋಶಿ ಹಾಗೂ ಯುನಿವರ್ಸಿಟಿ ಸಿಂಗರ್ ಉಷಾ ಡಿಸೋಜಾ ಅವರು ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಮತ್ತು ಆಶಾ ಭೋಸಲೆ ಅವರ ಜನಪ್ರಿಯ ಗೀತೆಗಳನ್ನು ಸುಮಧುರವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಸದಾಬಹಾರ್ ಹಾಡುಗಳು ಮೊಳಗಿದವು. ಅನೇಕರು ಹಾಡುಗಳಿಗೆ ತಾಳ ಹಾಕಿ, ಕುಣಿದು ಸಂಭ್ರಮಿಸಿದರು.
‘ಪ್ಯಾರ್ ದಿವಾನಾ ಹೋತಾ ಹೈ’, ‘ಚಲ್ತೇ ಚಲ್ತೇ’, ‘ಮೇರೇ ಸಪ್ನೋ ಕಿ ರಾನಿ’, ‘ಹವಾ ಹವಾ’ ಸೇರಿದಂತೆ ಹಲವು ಜನಪ್ರಿಯ ಗೀತೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ಗಾಯಕರ ಗಾಯನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಟ ಹಾಗೂ ನಿರ್ದೇಶಕ ನಾಗರಾಜ ಕುಂಬಾರ್, ಕಿಶೋರ್ ಕುಮಾರ್ ಅವರ ಗಾಯನ ಇಂದಿಗೂ ಸಂಗೀತ ಪ್ರಿಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ಕಾರ್ಯಕ್ರಮಗಳು ಉತ್ತಮ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಸದಾಶಿವ ಜಿಡಗೇಕರ್ ಅವರು ಕಿಶೋರ್ ಕುಮಾರ್ ಅವರ ಸಂಗೀತ ಸೇವೆಯನ್ನು ಸ್ಮರಿಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾದಪ್ರಿಯ ಸಾಂಸ್ಕೃತಿಕ ಗೆಳೆಯರ ಬಳಗದ ಅಧ್ಯಕ್ಷ ಕೆ.ಪಿ. ಗಿರಿಧರ ಅವರು, ಮುಂದೆಯೂ ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಡಾ. ಅಂಬುಜಾ ಮಳಖೇಡಕರ, ಎಸ್.ಎಸ್. ಪಾಟೀಲ್, ನಾರಾಯಣ ಜೋಶಿ ಸೇರಿದಂತೆ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ್ ಅಷ್ಟಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.



