ಶಿಕ್ಷಣಸಾಂಸ್ಕೃತಿಕ

ಗುರುವಿನ ಮಾರ್ಗದರ್ಶನವೇ ಯಶಸ್ವಿ ಜೀವನದ ಮೂಲ: ಚನ್ನಮ್ಮ ಪಂಚಾಳ್

ಗುರು ಪೂರ್ಣಿಮೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವದ ಕುರಿತು ವಿಶೇಷ ಉಪನ್ಯಾಸ

ಬೀದರ್, ಜು.29: ಅಕ್ಷರ ಕಲಿಸುವವರಷ್ಟೇ ಅಲ್ಲ, ಜೀವನದ ಸಂಕಷ್ಟದ ಸಂದರ್ಭಗಳಲ್ಲೂ ಸರಿಯಾದ ದಾರಿಯನ್ನು ತೋರಿಸುವವರು ಗುರುಗಳೇ ಎಂದು ಶ್ರೀಮತಿ ಚನ್ನಮ್ಮ ಪಂಚಾಳ್ ಹೇಳಿದರು.

ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತಮಾತೆ ಹಾಗೂ ಮಹರ್ಷಿ ವ್ಯಾಸರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗುರುವಿನ ಮಹತ್ವವನ್ನು ವಿವರಿಸಿದರು.

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ ಎಂದು ಹೇಳಿದರು. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು. ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕು ನೀಡುವವನೇ ಗುರು ಎಂದು ತಿಳಿಸಿದರು.

ಕಬೀರದಾಸರ ದೋಹೆಗಳನ್ನು ಉಲ್ಲೇಖಿಸಿದ ಅವರು, ಗುರು ಮತ್ತು ಗೋವಿಂದ ಇಬ್ಬರೂ ಎದುರಿದ್ದರೆ ಮೊದಲು ಗುರುವಿಗೆ ನಮಸ್ಕರಿಸಬೇಕು. ಏಕೆಂದರೆ ದೇವರ ದರ್ಶನ ಮಾಡಿಸುವವರೇ ಗುರು ಎಂದು ಹೇಳಿದರು. ಗುರುಕುಲ ಪದ್ಧತಿಯ ಮಹತ್ವ, ಗುರು-ಶಿಷ್ಯ ಪರಂಪರೆ ಹಾಗೂ ಗುರು ಪೂರ್ಣಿಮೆಯ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದ ಅವರು, ಮಹರ್ಷಿ ವ್ಯಾಸರು ನಾಲ್ಕು ವೇದಗಳು, 18 ಪುರಾಣಗಳು ಹಾಗೂ ಬ್ರಹ್ಮಸೂತ್ರಗಳ ರಚನೆಗೆ ಕಾರಣಕರ್ತರು ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಹಾಗೂ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುವರ್ಣ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ಗುರುಭಕ್ತಿ, ಶಿಸ್ತು ಮತ್ತು ಸಮರ್ಪಣೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಏಕಲವ್ಯನ ಗುರುಭಕ್ತಿಯನ್ನು ಉದಾಹರಿಸಿದ ಅವರು, ಗುರುವಿನ ಮಾರ್ಗದರ್ಶನದಲ್ಲಿ ಸಾರ್ಥಕ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಂಸ್ಥೆಯ ಸಹ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಮಾತ್ರವಲ್ಲದೆ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಗುರುವಿನ ಮಾರ್ಗದರ್ಶನದಲ್ಲಿ ಉನ್ನತ ಗುರಿಗಳನ್ನು ಸಾಧಿಸುವ ಸಂಕಲ್ಪ ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶರಣು ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಸಿರಿಗೇರಿ, ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜಯಲಕ್ಷ್ಮಿ ಶಿವಪುತ್ರ ಸ್ವಾಗತಿಸಿದರು. ದೀಪಿಕಾ ಮಲಶೆಟ್ಟಿ ಭಕ್ತಿಗೀತೆ ಹಾಡಿದರು. ರೇಖಾ ಮಲ್ಲಿಕಾರ್ಜುನ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button