ರಾಷ್ಟ್ರಪತಿ ಭವನದಲ್ಲಿ ಚಿತ್ರಕಲಾ ಪ್ರದರ್ಶನ ನೀಡಿ ಗೌರವ ಪಡೆದ ಕಲಾವಿದ ರೆಹಮಾನ್ ಪಟೇಲ್ಗೆ ಸನ್ಮಾನ
ಸುರಪುರದ ಕಲೆಯನ್ನು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದ ಸಾಧನೆಗೆ ಹಿರಿಯ ನಾಗರಿಕರ ತಂಡದಿಂದ ಅಭಿನಂದನೆ

ಕಲಬುರಗಿ, ಆ.4: ಸುರಪುರದ ಚಿತ್ರಕಲೆಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶಿಸಿ, ಭಾರತದ ರಾಷ್ಟ್ರಪತಿ ಅವರಿಂದ ವಿಶೇಷ ಗೌರವ ಪಡೆದ ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಅವರನ್ನು ಹಿರಿಯ ನಾಗರಿಕರ ತಂಡದ ಸದಸ್ಯರು ಸನ್ಮಾನಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಪಿಡಪ್ಪ ಜಲಗಾರ್ ಸುರಪುರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ರೆಹಮಾನ್ ಪಟೇಲ್ ಅವರ ಕಲಾ ಸಾಧನೆ ಮತ್ತು ರಾಷ್ಟ್ರಮಟ್ಟದಲ್ಲಿ ಪಡೆದ ಗೌರವವನ್ನು ಪರಿಚಯಿಸಲಾಯಿತು. ಬಳಿಕ ನಗರದ ಜೇವರ್ಗಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಸುರಪುರದ ಚಿತ್ರಕಲೆಯನ್ನು ರಾಷ್ಟ್ರಪತಿ ಭವನದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾ ಕ್ಷೇತ್ರದಲ್ಲಿ ಅವರ ನಿರಂತರ ಪರಿಶ್ರಮ ಮತ್ತು ಸಂಶೋಧನಾ ಮನೋಭಾವ ಯುವ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಿ.ಬಿ. ಹುಗಾರ, ಚೆನ್ನಬಸವ ದೇಶಮುಖ, ಬಾಲಕೃಷ್ಣ ಸಾಲವಡಗಿ, ನಾಗರಾಜ ಸುರಪುರ, ಗಂಗಾಧರ ಸುರಪುರ, ಡಾ. ರಾಘವೇಂದ್ರ ಗುಡಗುಂಟಿ, ವೆಂಕಟೇಶ್ ಆಡವಾಣಿ, ತೆನ್ಸಿಂಗ್ ಹಜಾರೆ, ವಿಜಯಕುಮಾರ್ ಬೈಚಬಾಳ, ಮಲ್ಲೇಶಪ್ಪ ಗೋದೂರು, ವೆಂಕಟೇಶ್ ಕುಲಕರ್ಣಿ, ಅರುಣಕುಮಾರ್ ಫುಲೆಸೆ, ರೇವಣಸಿದ್ದಪ್ಪ ಹೊಟ್ಟಿ, ಸೈಯದ್ ಮುಸ್ತಫಾ ಹಾಗೂ ರಾಜಶೇಖರ ಚಿಂಚೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



