ನೀರೆತ್ತುವ ಮೋಟಾರ್, ಕೇಬಲ್ ಕಳವು ಪ್ರಕರಣ ಭೇದಿಸಿದ ಪೊಲೀಸರು: ಬಾಲಕ ಸೇರಿ ಇಬ್ಬರ ಬಂಧನ
ಐದು ನೀರೆತ್ತುವ ಮೋಟಾರ್, ಮೂರು ಸ್ಟಾರ್ಟರ್ ಹಾಗೂ ಕೇಬಲ್ ವಶಕ್ಕೆ; ಮೂರು ಕಳವು ಪ್ರಕರಣಗಳಿಗೆ ತೆರೆ

ಕಲಬುರಗಿ, ಆ.4: ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನೀರೆತ್ತುವ ಮೋಟಾರ್ ಹಾಗೂ ಕೇಬಲ್ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿ, ಬಾಲಕನೊಬ್ಬ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಹಾಪುರ ತಾಲ್ಲೂಕಿನ ಗೋಗಿ ತಾಂಡಾದ ನಿವಾಸಿ ಕಿಶನ್ ತಂದೆ ಟೋಪು ಜಾಧವ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕಳವು ಮಾಡಿದ್ದ ಐದು ನೀರೆತ್ತುವ ಮೋಟಾರ್ಗಳು, ಮೂರು ಸ್ಟಾರ್ಟರ್ಗಳು ಹಾಗೂ ಕೇಬಲ್ ವೈರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರದಂತೆ, ಕಳೆದ ಮೇ 10ರಂದು ಕಾಚಾಪೂರ ಗ್ರಾಮದ ಹಳ್ಳದ ಸಮೀಪ ಅಳವಡಿಸಲಾಗಿದ್ದ ಮೂರು ಸ್ಟಾರ್ಟರ್, ಪೂಜಾ ಸಾಮಗ್ರಿ ಹಾಗೂ ಆಟೋ ಸ್ಟಾರ್ಟರ್ಗಳನ್ನು ಕಳವು ಮಾಡಲಾಗಿತ್ತು. ಅದೇ ರೀತಿ ಜೂನ್ 18ರಂದು ತೆಲಗಬಾಳ ಗ್ರಾಮದ ಸಮೀಪದ ಜಮೀನಿನಲ್ಲಿ ಅಳವಡಿಸಲಾಗಿದ್ದ ನೀರೆತ್ತುವ ಮೋಟಾರ್ ಹಾಗೂ ಕೇಬಲ್ ಕಳವು ನಡೆದಿತ್ತು. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಇದಲ್ಲದೆ, ಕಳೆದ ಜನವರಿ 16ರಂದು ಹರವಾಳ ಗ್ರಾಮದ ಹಳ್ಳದ ಬಳಿ ಅಳವಡಿಸಲಾಗಿದ್ದ ನೀರೆತ್ತುವ ಮೋಟಾರ್ ಹಾಗೂ ಕೇಬಲ್ ಕಳವು ಪ್ರಕರಣವೂ ದಾಖಲಾಗಿತ್ತು. ತನಿಖೆ ವೇಳೆ ಈ ಮೂರು ಪ್ರಕರಣಗಳಲ್ಲೂ ಇದೇ ಆರೋಪಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಡಿವೈಎಸ್ಪಿ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಬಾಪುಗೌಡ ಪಾಟೀಲ್, ಪಿಎಸ್ಐ ಶ್ರೀಶೈಲ ಅಂಬಾಟಿ ಅವರ ನೇತೃತ್ವದಲ್ಲಿ ಎಎಸ್ಐ ಸುರೇಶಕುಮಾರ್ ಹಾಗೂ ಸಿಬ್ಬಂದಿಗಳಾದ ಹೈದರಸಾಬ್, ಶಿವಾನಂದ್, ಸಿದ್ದರಾಮ, ದೊಡ್ಡಬಸಪ್ಪ, ಭಾಷಾಸಾಬ್ ಮತ್ತು ಮೌಲಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅಭಿನಂದಿಸಿದ್ದಾರೆ.



