ಜಿಲ್ಲಾಸುದ್ದಿ

ಬೆಳೆವಿಮೆ ಜಾಗೃತಿ ಅಭಿಯಾನಕ್ಕೆ ಚಾಲನೆ; ಗ್ರಾಮವಾರು ವಾಹನಗಳ ಮೂಲಕ ರೈತರಿಗೆ ಮಾಹಿತಿ

ಪಿಎಂಎಫ್‌ಬಿವೈ ಯೋಜನೆಯಡಿ ಮುಂಗಡ ನೋಂದಣಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಕರೆ; ಪ್ರಕೃತಿ ವಿಕೋಪದಿಂದ ರೈತರ ರಕ್ಷಣೆಗೆ ಬೆಳೆವಿಮೆ ಮಹತ್ವ

ಕಲಬುರಗಿ, ಜು.29: 2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಕುರಿತು ರೈತರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಗ್ರಾಮವಾರು ವಾಹನಗಳ ಮೂಲಕ ವಿಶೇಷ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಕೇವಲ ಬಿತ್ತನೆ ಕಾರ್ಯ ನಡೆಸುವುದಷ್ಟೇ ಅಲ್ಲದೆ, ಬಿತ್ತಿದ ಬೆಳೆಯನ್ನು ಬೆಳೆವಿಮೆಗೆ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಹಾಗೂ ಬೆಳೆವಿಮೆ ಸಂಸ್ಥೆಯ ವತಿಯಿಂದ ಜಿಲ್ಲೆಯಾದ್ಯಂತ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಬೆಳೆವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆನಷ್ಟದಿಂದ ರೈತರನ್ನು ರಕ್ಷಿಸುವ ಉದ್ದೇಶದಿಂದ ಪಿಎಂಎಫ್‌ಬಿವೈ ಯೋಜನೆ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳಿಂದಾಗುವ ನಷ್ಟಕ್ಕೆ ಯೋಜನೆಯಡಿ ಪರಿಹಾರ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿದರು.

ಬಿತ್ತನೆ ವಿಫಲವಾಗುವ ಸಂದರ್ಭ, ಮಧ್ಯಂತರ ಬೆಳೆ ಹಾನಿ, ಸ್ಥಳೀಯ ವಿಕೋಪ, ಬೆಳೆ ಕಟಾವು ಪ್ರಯೋಗ ಹಾಗೂ ಕಟಾವಿನ ನಂತರ ಉಂಟಾಗುವ ಬೆಳೆ ಹಾನಿ ಸೇರಿದಂತೆ ವಿವಿಧ ಹಂತಗಳಲ್ಲಿ ರೈತರಿಗೆ ವಿಮಾ ರಕ್ಷಣೆ ದೊರೆಯುವುದರಿಂದ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಕಲಬುರಗಿ ಹಾಗೂ ಸೇಡಂ ತಾಲೂಕುಗಳ ಉಪ ಕೃಷಿ ನಿರ್ದೇಶಕರು ಮತ್ತು ಇಂಡಸ್ ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button