ಅಪಘಾತ
ಕಾರು–ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಚೆನ್ನೈ–ಸೂರತ್ ಹೆದ್ದಾರಿಯಲ್ಲಿ ಭೀಕರ ಅಪಘಾತ; ಮತ್ತೋರ್ವ ಸವಾರ ಗಂಭೀರ ಗಾಯ
ಜೇವರ್ಗಿ, ಜು.28: ತಾಲೂಕಿನ ಗಂವಾರ್ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ಚೆನ್ನೈ–ಸೂರತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಯಾದಗಿರಿ ಜಿಲ್ಲೆಯ ಶಿರವಾಳ ಗ್ರಾಮದ ಹನುಮಂತ ತಾಯಪ್ಪ ಕಂಬದ್ (30) ಎಂದು ಗುರುತಿಸಲಾಗಿದೆ. ಬೈಕ್ನ ಹಿಂಬದಿ ಸವಾರ ಗಂವಾರ್ ಗ್ರಾಮದ ಸಾಯಬಣ್ಣ ದತ್ತಪ್ಪ ತಳವಾರ್ (30) ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಪಿಎಸ್ಐ ಗಜಾನಂದ ಬಿರಾದಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.



