ಸರ್ಕಾರಿ ಶಾಲೆಗಳ ಖಾಸಗೀಕರಣಕ್ಕೆ ಎಐಡಿಎಸ್ಓ ತೀವ್ರ ಖಂಡನೆ
ಸಾರ್ವಜನಿಕ ಶಿಕ್ಷಣವನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ನಿರ್ಧಾರ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಹಾಗೂ ಖಾಸಗಿ ಸಂಸ್ಥೆಗಳ ದತ್ತು ಯೋಜನೆಗೆ ಒಳಪಡಿಸಲು ಮುಂದಾಗಿರುವ ಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್ಓ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ದೇವದುರ್ಗ, ಲಾಭದ ಉದ್ದೇಶದಿಂದ ಶಿಕ್ಷಣವನ್ನು ನಡೆಸುತ್ತಿರುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು ಹಸ್ತಾಂತರಿಸುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಇದು ಸರ್ಕಾರಿ ಶಾಲೆಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡುವ ನಿರ್ಧಾರವಾಗಿದ್ದು, ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ಅವರು ಹೇಳಿದ್ದಾರೆ.
ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳಿಗೆ ಶಾಲೆಗಳನ್ನು ಒಪ್ಪಿಸುವುದು ಸಮಂಜಸವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಕ್ರಮವು ಸಾರ್ವಜನಿಕ ಶಿಕ್ಷಣದ ಆಶಯಕ್ಕೆ ಧಕ್ಕೆ ತರುವುದಲ್ಲದೆ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಪ್ರಯತ್ನವಾಗಿದೆ ಎಂದು ಎಐಡಿಎಸ್ಓ ಆರೋಪಿಸಿದೆ.
ರಾಜ್ಯ ಸರ್ಕಾರ ಈ ನಿರ್ಧಾರವನ್ನು ತಕ್ಷಣ ಹಿಂಪಡೆದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಂಘಟಿತ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ವೆಂಕಟೇಶ್ ದೇವದುರ್ಗ ಎಚ್ಚರಿಕೆ ನೀಡಿದ್ದಾರೆ.



