‘ಕಾಕ್ರೋಚ್ ಜನತಾ ಪಕ್ಷ ವಿದೇಶಿ ಸಂಘಟನೆ’: ಕಾಂಗ್ರೆಸ್ ವಿರುದ್ಧ ಮಲ್ಕಾಪುರೆ ವಾಗ್ದಾಳಿ
ಸಂಸತ್ ಕಲಾಪ, ರಾಜ್ಯ ರಾಜಕೀಯ ಮತ್ತು ಸರ್ಕಾರದ ಆಡಳಿತ ವೈಫಲ್ಯ ಕುರಿತು ಬಿಜೆಪಿ ಮುಖಂಡರ ಟೀಕೆ

ಬೀದರ್, ಜು.22: ಕಾಕ್ರೋಚ್ ಜನತಾ ಪಕ್ಷವು ಯಾವುದೇ ರಾಜಕೀಯ ಪಕ್ಷವಲ್ಲ, ಅದು ವಿದೇಶಿ ಸಂಘಟನೆಯಾಗಿದೆ. ಅಂತಹ ಸಂಘಟನೆಗೆ ಬೆಂಬಲ ಸೂಚಿಸಿ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುವುದು ಸಂವಿಧಾನಕ್ಕೆ ಮಾಡುವ ಅನ್ಯಾಯವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರೊಂದಿಗೆ ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರು ಧರಣಿ ನಡೆಸುತ್ತಿರುವುದು ಸಂಸತ್ತಿನಲ್ಲಿ ಚರ್ಚಿಸಬೇಕಾದ ಜನಪರ ವಿಷಯಗಳ ಕೊರತೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ವಿವಿಧ ರಾಜಕೀಯ ಬೆಳವಣಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಹೊಸ ಕಾಮಗಾರಿಗಳನ್ನು ಕೈಗೊಳ್ಳುವ ಸಾಮರ್ಥ್ಯವೂ ಇಲ್ಲ ಎಂದು ಮಲ್ಕಾಪುರೆ ಆರೋಪಿಸಿದರು.
ಸರ್ಕಾರ ಜನಪರ ಆಡಳಿತ ನೀಡುವ ಬದಲು ರಾಜಕೀಯ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ದೂರಿದರು.



