ಪರಾರಿಯಾಗಿದ್ದ ಕೈದಿ ಬಂಧನದಲ್ಲಿ ಗೊಂದಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ
ಬೀದರ್–ಕಲಬುರಗಿ ಪೊಲೀಸರ ಹೇಳಿಕೆಗಳಲ್ಲಿ ವ್ಯತ್ಯಾಸ ಆರೋಪ; ನಿಜಾಂಶ ಬಹಿರಂಗಪಡಿಸುವಂತೆ ಬಿಜೆಪಿ ಒಬಿಸಿ ಮೋರ್ಚಾ ಆಗ್ರಹ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಒಬ್ಬನ ಬಂಧನಕ್ಕೆ ಸಂಬಂಧಿಸಿದಂತೆ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪೊಲೀಸರ ಹೇಳಿಕೆಗಳಲ್ಲಿ ಗೊಂದಲವಿದ್ದು, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವಣ್ಣ ಮಾಕೇರಿ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಪೊಲೀಸ್ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಜುಲೈ 14ರಂದು ಬೆಳಗಿನ ಜಾವ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವುದು ಪೊಲೀಸ್ ಇಲಾಖೆಯ ದೊಡ್ಡ ವೈಫಲ್ಯವಾಗಿದೆ. ಪರಾರಿಯಾಗಿದ್ದ ಸಂತೋಷ್ ಎಂಬ ಕೈದಿಯನ್ನು ಬಂಧಿಸಿರುವುದು ಶ್ಲಾಘನೀಯವಾದರೂ, ಬಂಧನದ ಕುರಿತು ಎರಡು ಜಿಲ್ಲೆಗಳ ಪೊಲೀಸರು ನೀಡಿರುವ ಮಾಹಿತಿ ಪರಸ್ಪರ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಬೀದರ್ ಪೊಲೀಸರು ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈದಿಯನ್ನು ಬಂಧಿಸಿ ಕಲಬುರಗಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳುತ್ತಿದ್ದರೆ, ಕಲಬುರಗಿ ಪೊಲೀಸರು ಕುಸನೂರು ಕೈಗಾರಿಕಾ ಪ್ರದೇಶದಲ್ಲಿ ಬಂಧಿಸಿ, ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಎರಡರಲ್ಲಿ ಯಾವುದು ಸತ್ಯ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ನಿಜಾಂಶವನ್ನು ಸಾರ್ವಜನಿಕರ ಮುಂದಿಡಬೇಕು. ಜೊತೆಗೆ ಇನ್ನೂ ಪರಾರಿಯಾಗಿರುವ ಉಳಿದ ಇಬ್ಬರು ಕೈದಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೊಲೆ, ದರೋಡೆ, ಗಾಂಜಾ, ಸುಲಿಗೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಪೊಲೀಸ್ ವಶದಲ್ಲಿದ್ದ ವ್ಯಕ್ತಿಯ ಸಾವಿನ ಪ್ರಕರಣ ಸೇರಿದಂತೆ ಇತ್ತೀಚಿನ ಹಲವು ಘಟನೆಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಜನರಿಗೆ ತಿಳಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವಣ್ಣ ಮಾಕೇರಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಭಜಂತ್ರಿ, ಬಸವರಾಜ್ ಮದ್ರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



