ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ನಾಳೆ ಸಾವಜಿ ಸಮಾಜದ ಐತಿಹಾಸಿಕ ವಲಯ ಮಟ್ಟದ ಸಮ್ಮೇಳನ

ಜುಲೈ 19ರಂದು ಜಗದಾಂಬಾ ಮಂದಿರದಲ್ಲಿ ಕಾರ್ಯಕ್ರಮ; ಐದು ಜಿಲ್ಲೆಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗಿ

ನಗರದ ಶಹಾಬಜಾರ್‌ನ ಜಗದಾಂಬಾ ಮಂದಿರದಲ್ಲಿ ಜುಲೈ 19ರಂದು ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಸಾವಜಿ) ಸಮಾಜದ ವಲಯ ಮಟ್ಟದ ಐತಿಹಾಸಿಕ ಸಮ್ಮೇಳನ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಶ್ರೀರಾಮ್ ಡಿ. ಪವಾರ್ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಕೋರ್ ಸಮಿತಿ ಸಭೆ ಹಾಗೂ ವಲಯ ಮಟ್ಟದ ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು. ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಂದ ಸುಮಾರು 350ರಿಂದ 400 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದ ಮುಖ್ಯ ಉದ್ದೇಶ ಸಮಾಜದಲ್ಲಿ ಏಕತೆ ಬೆಳೆಸುವುದು, ಸಮಾಜದ ಅಭಿವೃದ್ಧಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಚಿಂತನೆ ನಡೆಸಿ ಮುಂದಿನ ಕಾರ್ಯತಂತ್ರ ರೂಪಿಸುವುದಾಗಿದೆ ಎಂದು ಹೇಳಿದರು.

ಸಮಾಜದ ಕಲ್ಯಾಣಕ್ಕಾಗಿ ವಿವಿಧ ವಿಷಯಗಳ ಕುರಿತು ಚರ್ಚೆ, ಕೋರ್ ಸಮಿತಿ ಸಭೆ ಹಾಗೂ ಎರಡು ಅಧಿವೇಶನಗಳು ನಡೆಯಲಿವೆ. ಮೊದಲ ಅಧಿವೇಶನ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ, ಎರಡನೇ ಅಧಿವೇಶನ ಸಂಜೆ 5ರಿಂದ 7ರವರೆಗೆ ನಡೆಯಲಿದೆ. ಮಾದಕ ವ್ಯಸನ ವಿರೋಧಿ ಜಾಗೃತಿ, ಶಿಕ್ಷಣ ಸೇರಿದಂತೆ ಹಲವು ಸಮಕಾಲೀನ ವಿಷಯಗಳ ಕುರಿತ ವಿಶೇಷ ಚರ್ಚೆಗಳೂ ಸಮ್ಮೇಳನದಲ್ಲಿ ನಡೆಯಲಿವೆ.

ಆರ್ಥಿಕವಾಗಿ ಹಿಂದುಳಿದ ಸದಸ್ಯರು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಮತ್ತು ಇ-ಸೇವಾ ಯೋಜನೆಯಡಿ ಕಂಪ್ಯೂಟರ್‌ಗಳನ್ನು ಸಮಾಜಕ್ಕೆ ನೀಡುವ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀರಾಮ್ ಡಿ. ಪವಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಸಮಾಜದ ಗೌರವಾಧ್ಯಕ್ಷ ನಾರಾಯಣಸಾ ಭಾಂಡಗೆ, ರಾಜ್ಯಾಧ್ಯಕ್ಷ ಶಶಿಕುಮಾರ್ ಮೆಹರವಾಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಬಾಡಿ, ಮಾಜಿ ಶಾಸಕ ಅಶೋಕ್ ಕಾಟವೆ ಸೇರಿದಂತೆ ರಾಜ್ಯದ ವಿವಿಧ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ಯಶವಂತರಾವ್ ಮೆಂಗಜಿ, ವಿಷ್ಣುಸಾ ಬಾರಾಡ್, ರಾಮಕಾಂತ್ ಚವ್ಹಾಣ್, ನಾಗೇಶ್ ಚೂಡಾಮಣಿ, ಮಾರುತಿರಾವ್ ಕೆ. ಪವಾರ್, ಸಂಜಯ್ ಮಿಸ್ಕಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button