ಬರ ಎದುರಿಸಲು ಈಗಲೇ ಸಜ್ಜಾಗಿ: ಅಧಿಕಾರಿಗಳಿಗೆ ಸುಬೋಧ ಯಾದವ ಕಟ್ಟುನಿಟ್ಟಿನ ಸೂಚನೆ
ಕುಡಿಯುವ ನೀರು, ಮೇವು ದಾಸ್ತಾನು, ಬೆಳೆ ವಿಮೆಗೆ ಆದ್ಯತೆ; ಕೆಕೆಆರ್ಡಿಬಿ ಕಾಮಗಾರಿ ವಿಳಂಬಕ್ಕೆ ಅಸಮಾಧಾನ

ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಅದನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಜ್ಜಾಗಬೇಕು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರದ ಪರಿಸ್ಥಿತಿಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಕೆಲ ಮಳೆಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಪಡೆದ ಅವರು, ಮಳೆಯ ನಿಖರ ಅಂಕಿ-ಅಂಶ ಸಂಗ್ರಹಕ್ಕೆ ರೇನ್ ಗೇಜ್ ಕೇಂದ್ರಗಳ ದುರಸ್ತಿ ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಕೆಎಸ್ಎನ್ಡಿಎಂಸಿ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜಲಾಶಯಗಳಲ್ಲಿನ ನೀರಿನ ಪ್ರಮಾಣವನ್ನು ಪರಿಶೀಲಿಸಿದ ಸುಬೋಧ ಯಾದವ, ಮಳೆ ಕೊರತೆ ಮುಂದುವರಿದರೆ ಬಾವಿ ಮತ್ತು ಕೊಳವೆ ಬಾವಿಗಳ ಮೂಲಕ ಪರ್ಯಾಯ ನೀರು ಪೂರೈಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಲಬುರಗಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ವೇಗ ನೀಡುವಂತೆ ಹಾಗೂ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನಿರಂತರ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ನಾರಾಯಣಪುರ ಜಲಾಶಯದಿಂದ ನಗರಕ್ಕೆ ನೀರು ತರಲು ₹1,850 ಕೋಟಿ ವೆಚ್ಚದ ಪೈಪ್ಲೈನ್ ಯೋಜನೆಯ ಡಿಪಿಆರ್ ಸಿದ್ಧವಾಗಿದ್ದು, ಪ್ರಸ್ತುತ ನೀರಿನ ಸಮಸ್ಯೆ ಇರುವ ವಾರ್ಡ್ಗಳಿಗೆ ಪ್ರತಿದಿನ 200 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು, ಜೂನ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 168.1 ಮಿ.ಮೀ. ಮಳೆಯಾಗಬೇಕಿದ್ದರೆ ಕೇವಲ 80.8 ಮಿ.ಮೀ. ಮಾತ್ರ ದಾಖಲಾಗಿದೆ ಎಂದು ತಿಳಿಸಿದರು. 8.90 ಲಕ್ಷ ಹೆಕ್ಟೇರ್ ಗುರಿಯ ಪೈಕಿ ಇದುವರೆಗೆ 2.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದ್ದು, ಹಲವು ತಾಲೂಕುಗಳಲ್ಲಿ ಇನ್ನೂ ಸಮರ್ಪಕ ಮಳೆಯಾಗಿಲ್ಲ ಎಂದರು. ರೈತರಿಗೆ 22,192 ಕ್ವಿಂಟಲ್ ಬೀಜ ಹಾಗೂ 51,045 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದ್ದು, ಇನ್ನೂ 32,894 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದು ವಿವರಿಸಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಂಜಯ್ ರೆಡ್ಡಿ, ಮುಂದಿನ 34 ವಾರಗಳಿಗೆ ಬೇಕಾಗುವಷ್ಟು ಮೇವು ಜಿಲ್ಲೆಯಲ್ಲೇ ಲಭ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬೆಳೆ ವಿಮೆ ನೋಂದಣಿ ಹೆಚ್ಚಿಸಲು ಸೂಚನೆ
ಸಭೆಯಲ್ಲಿ ಬೆಳೆ ವಿಮೆ ಕುರಿತು ಮಾತನಾಡಿದ ಸುಬೋಧ ಯಾದವ, ಕಳೆದ ವರ್ಷ ಜಿಲ್ಲೆಗೆ ₹650 ಕೋಟಿ ಬೆಳೆ ವಿಮೆ ಪರಿಹಾರ ದೊರೆತಿದ್ದು, ಈ ವರ್ಷವೂ ಬರದ ಸಾಧ್ಯತೆ ಇರುವುದರಿಂದ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿಗೆ ಶಾಶ್ವತ ಪರಿಹಾರ ರೂಪಿಸಿ
ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆಯಲ್ಲಿ, ಪ್ರಸ್ತುತ ಐದು ಗ್ರಾಮಗಳಿಗೆ ಟ್ಯಾಂಕರ್ ಹಾಗೂ 35 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪ್ರತಿವರ್ಷ ಸಮಸ್ಯೆ ಎದುರಿಸುವ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.
ಕೆಕೆಆರ್ಡಿಬಿ ಕಾಮಗಾರಿ ವಿಳಂಬಕ್ಕೆ ಗರಂ
ಕೆಕೆಆರ್ಡಿಬಿ ಅನುದಾನದಡಿ ಮಂಜೂರಾದ ಅನೇಕ ಕಾಮಗಾರಿಗಳು ಎರಡು ವರ್ಷ ಕಳೆದರೂ ಆರಂಭವಾಗದಿರುವುದಕ್ಕೆ ಸುಬೋಧ ಯಾದವ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಣ ಬಿಡುಗಡೆಯಾದ ಬಳಿಕವೂ ಕಾಮಗಾರಿ ಆರಂಭಿಸದ ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್ಐಡಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಮಗಾರಿಗಳ ಪ್ರಗತಿ ಬಗ್ಗೆ ಮಂಡಳಿಗೆ ನಿಯಮಿತ ಮಾಹಿತಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆಕೆಆರ್ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಅಪರ ನಿರ್ದೇಶಕಿ ಪ್ರವೀಣ್ ಪ್ರಿಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



