ರಾಜ್ಯ

ದಿನಗೂಲಿ ನೌಕರರ ಹಕ್ಕುಗಳಿಗೆ 15 ದಿನಗಳ ಗಡುವು: ಸೌಲಭ್ಯ ಜಾರಿಗೆ ಆಗ್ರಹಿಸಿ ಹೋರಾಟದ ಎಚ್ಚರಿಕೆ

2012ರ ಕಾಯ್ದೆಯಡಿ ಸಿಗಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಂಘದ ಎಚ್ಚರಿಕೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ 2012ರ ಕಾಯ್ದೆಯಡಿ ನೀಡಬೇಕಾದ ಕಾನೂನುಬದ್ಧ ಸೌಲಭ್ಯಗಳನ್ನು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ, ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಶ್ರಮಜೀವಿಗಳ ವೇದಿಕೆ ಹಾಗೂ ಸರ್ಕಾರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮತ್ತು ಸಂಸ್ಥಾಪಕ ಚಂದ್ರಶೇಖರ ಎಸ್. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರ ಕಾಯ್ದೆಯಲ್ಲಿ ದಿನಗೂಲಿ ನೌಕರರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಹಲವು ವರ್ಷಗಳಿಂದ ಸರ್ಕಾರ ಅವುಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗಿದ್ದು, ಉಚ್ಚ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿನಗೂಲಿ ನೌಕರರಿಗೆ ಸರ್ಕಾರದ ಇತರ ನೌಕರರಿಗೆ ದೊರೆಯುವಂತೆಯೇ ಸಮಾನ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು. ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಶೇಕಡಾ 100ರಷ್ಟು ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ ರಜೆ ನಗದೀಕರಣ, ವಾರ್ಷಿಕ ವೇತನ ಬಡ್ತಿ, ಹಬ್ಬದ ಮುಂಗಡ ಹಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ 15 ದಿನಗಳ ಬಳಿಕ ರಾಜ್ಯಾದ್ಯಂತ ನಿರ್ದಿಷ್ಟ ಹಂತದ ಹೋರಾಟ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹಿರೇಮಠ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಹೀಂ, ಅನವೀರಯ್ಯ ಆರ್. ಹಿರೇಮಠ, ನೀಲಕಂಠ ಧುತ್ತರಗಿ, ಈರಣ್ಣ ಚಿಂಚನಸೂರ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button