ಕಲ್ಯಾಣ ಕರ್ನಾಟಕದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮೊದಲ ಆದ್ಯತೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಣೆ; ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ, ಜು. 7: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಭಾಗದ ಪ್ರಗತಿ ಪರಿಶೀಲನಾ ಸಭೆ ಹಾಗೂ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ಕುಡಿಯುವ ನೀರು ಪೂರೈಕೆಗೆ ಯಾವುದೇ ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಸವಕಲ್ಯಾಣದಿಂದಲೇ ಕಲ್ಯಾಣ ಕರ್ನಾಟಕ ಭಾಗದ ಬರ ಪರಿಸ್ಥಿತಿ ಪರಿಶೀಲನೆ ಆರಂಭಿಸಿದ್ದು, ಶೀಘ್ರದಲ್ಲೇ ಬೆಳಗಾವಿ ವಿಭಾಗದಲ್ಲಿಯೂ ಇದೇ ರೀತಿಯ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮಳೆ ಬಂದರೆ ಬಿತ್ತನೆಗೆ ಸಿದ್ಧತೆ ಇರಲಿ
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಕಲ್ಯಾಣ ಕರ್ನಾಟಕದಲ್ಲಿ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದರೂ ಇದುವರೆಗೆ 11.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 51 ತಾಲೂಕುಗಳ ಪೈಕಿ 36 ತಾಲೂಕುಗಳು ತೀವ್ರ ಮಳೆ ಕೊರತೆ ಎದುರಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮುಂದಿನ ದಿನಗಳಲ್ಲಿ ಮಳೆ ಬರಲಿದೆ ಎಂಬ ವಿಶ್ವಾಸವಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ಮುಂಚಿತವಾಗಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಸಮಸ್ಯೆಗೆ ತ್ವರಿತ ಪರಿಹಾರ
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ, ಕೆಟ್ಟಿರುವ ಪರಿವರ್ತಕಗಳ ದುರಸ್ತಿ ಹಾಗೂ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪರಿವರ್ತಕಗಳ ದುರಸ್ತಿ ಹಾಗೂ ಬದಲಾವಣೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೂಪರ್ ಎಲ್‌ನಿನೋ ಕುರಿತು ಎಚ್ಚರಿಕೆ
ವಿಶ್ವದಾದ್ಯಂತ ಸೂಪರ್ ಎಲ್‌ನಿನೋ ಪರಿಣಾಮ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಷ್ಣಾಂಶ ಹೆಚ್ಚಳ ಹಾಗೂ ಡೆಂಗ್ಯೂ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹರಡುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ನದಿ ಜೋಡಣೆ ಯೋಜನೆಗೆ ಒತ್ತಾಯ
ಕಾವೇರಿ, ಕೃಷ್ಣಾ ಹಾಗೂ ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರ ಸರ್ಕಾರವು ₹1 ಲಕ್ಷ ಕೋಟಿ ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ. ಈ ಯೋಜನೆ ಜಾರಿಯಾದರೆ ರಾಜ್ಯಕ್ಕೆ ಹೆಚ್ಚುವರಿ ನೀರು ದೊರೆತು ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಭಾಗಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆ.ಕೆ.ಆರ್.ಡಿ.ಬಿ. ಅನುದಾನ ಸಮರ್ಪಕ ಬಳಕೆಗೆ ಸೂಚನೆ
ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ₹13 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಹಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, 2026-27ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಮುಂದಿನ 15 ದಿನಗಳೊಳಗೆ ಮಂಡಳಿಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದರು.
ಜನಸೇವೆಗೆ ಕಂದಾಯ ಅಭಿಯಾನ
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಇ-ಪೌತಿ, ದರಖಾಸ್ತು ಪೋಡಿ, ಹಕ್ಕುಪತ್ರ ವಿತರಣೆ ಹಾಗೂ ಕಂದಾಯ ಗ್ರಾಮ ಘೋಷಣೆ ಸೇರಿದಂತೆ ಹಲವು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವಿಶೇಷ ಅಭಿಯಾನ ಕೈಗೊಳ್ಳುವಂತೆ ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಣೆ
ಸಭೆಗೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2025-26ನೇ ಸಾಲಿನ ಯೋಜನೆಯಡಿ ಹಿಂದುಳಿದ ವರ್ಗದ ಮಾನ್ಯತೆ ಹೊಂದಿರುವ ಕಲಬುರಗಿ ಜಿಲ್ಲೆಯ ಆರು ಮಂದಿ ಪತ್ರಕರ್ತರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೀಡಿಯಾ ಕಿಟ್ ವಿತರಿಸಿದರು.
ವಾಣಿ ಸಾಮ್ರಾಟ್ ದಿನಪತ್ರಿಕೆಯ ಭರತ ಜಿ. ಖಮಿತ್ಕರ್, ಕರ್ನಾಟಕ ಸಂಧ್ಯಾಕಾಲದ ಅಮ್ಜದ್ ಅಲಿ, ವಿಜಯಕುಮಾರ್, ಸತ್ಯಕಾಮ ದಿನಪತ್ರಿಕೆಯ ಆನಂದ ಪಿ. ಮಣ್ಣೂರ, ಕ್ರಾಂತಿ ದಿನಪತ್ರಿಕೆಯ ಕಿರಣಕುಮಾರ್ ಸಿದ್ದರಾಮೇಶ್ವರ ಮುಧೋಳ ಹಾಗೂ ಕರ್ನಾಟಕ ಸಂಧ್ಯಾಕಾಲದ ಹಿರಿಯ ವರದಿಗಾರ್ತಿ ಆಸ್ಮಾ ಬೇಗಂ ಅವರಿಗೆ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯ್ ಸಿಂಗ್, ಮುಖ್ಯ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಂಸದರು, ಶಾಸಕರು ಹಾಗೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.



