ಕಲ್ಯಾಣ ಕರ್ನಾಟಕ

ಜನಾಭಿಪ್ರಾಯ ಜನಧ್ವನಿಯಾಗಿ ಬೆಳೆಯಲಿ; ಸಿದ್ದಣ್ಣ ರಾಜವಾಳರ ಆದರ್ಶ ಮುಂದುವರಿಯಲಿ: ಅಲ್ಲಂಪ್ರಭು ಪಾಟೀಲ್

ಕಲಬುರಗಿ, ಜು. 2: ಸಮಾಜಮುಖಿ ಹೋರಾಟಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನೊಂದವರಿಗೆ ನ್ಯಾಯ ದೊರಕಿಸುವಲ್ಲಿ ಜೀವನವಿಡೀ ಶ್ರಮಿಸಿದ ಸಿದ್ದಣ್ಣ ರಾಜವಾಳ ಅವರ ಆದರ್ಶವನ್ನು ಅವರ ಪುತ್ರ ರಾಜೇಂದ್ರ ರಾಜವಾಳ ಮುಂದುವರಿಸಬೇಕು ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿದ್ದಣ್ಣ ರಾಜವಾಳ ಅವರು ಪ್ರಾಮಾಣಿಕ ಹೋರಾಟಗಾರರಾಗಿ ಜನರ ವಿಶ್ವಾಸ ಗಳಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ, ಸಾರ್ವಜನಿಕ ಸಮಸ್ಯೆಗಳು ಹಾಗೂ ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುವ ಮೂಲಕ ಅನೇಕ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ರಾಜೇಂದ್ರ ರಾಜವಾಳ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮವು ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ನಿರ್ಭೀತಿಯಿಂದ ಬೆಳಕಿಗೆ ತಂದು, ಆಡಳಿತದ ಗಮನ ಸೆಳೆದು ಪರಿಹಾರ ದೊರಕಿಸುವ ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಸತ್ಯ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಕಾಳಜಿಯನ್ನು ಪತ್ರಿಕೋದ್ಯಮದ ಮೂಲಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸಿದರೆ, ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮವು ಜನರ ವಿಶ್ವಾಸ ಗಳಿಸಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಮಾಧ್ಯಮವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜೇಂದ್ರ ರಾಜವಾಳ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದ ಅವರು, ಸಿದ್ದಣ್ಣ ರಾಜವಾಳ ಅವರ ಹೆಸರಿಗೆ ಮತ್ತಷ್ಟು ಕೀರ್ತಿ ತರುವ ರೀತಿಯಲ್ಲಿ ಜನಪರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಚಿದಾನಂದ ಮಹಾಸ್ವಾಮಿಗಳು, ಕೋತಲಪ್ಪ ಮುತ್ಯ, ಶೋಭಾ ಬಾಣಿ, ಕಲ್ಯಾಣ್ ರಾವ್ ಮೂಲಗೆ, ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಲಚ್ಚಪ್ಪ ಜಮಾದಾರ, ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು, ಚಂದ್ರಕಾಂತ ತಳವಾರ, ಸಂತೋಷ ತಳವಾರ, ರವಿ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button