ಜಿಲ್ಲೆಯಲ್ಲಿ 3.51 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಗುರಿ: ಪಾಲಕರಿಗೆ ಶಾಸಕರ ಮನವಿ

ಕಲಬುರಗಿ, ಜೂ. 28:ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ–2026ಕ್ಕೆ ಜಿಲ್ಲೆಯಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ಜಿಲ್ಲೆಯ ಐದು ವರ್ಷದೊಳಗಿನ 3,51,716 ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ನಗರದ ದುಬೈ ಕಾಲೋನಿ ಸಮೀಪದ ಶಿವಾಜಿನಗರ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂ ಪ್ರಭು ಪಾಟೀಲ್ ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಶ್ರೀಮತಿ ಖನೀಜಾ ಫಾತಿಮಾ ಮಕ್ಕಳ ಆರೋಗ್ಯ ರಕ್ಷಣೆಗೆ ಪಲ್ಸ್ ಪೋಲಿಯೊ ಲಸಿಕೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ಪಾಲಕರೂ ತಮ್ಮ ಮಕ್ಕಳಿಗೆ ತಪ್ಪದೇ ಎರಡು ಹನಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕಾತ್ಯನಾಳ ಮಾತನಾಡಿ, ಜಿಲ್ಲೆಯ ಒಟ್ಟು ಜನಸಂಖ್ಯೆ 29,54,807 ಇದ್ದು, 5 ವರ್ಷದೊಳಗಿನ 3,51,716 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ದಿನ 1,519 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜೂನ್ 29ರಿಂದ ಜುಲೈ 1ರವರೆಗೆ 1,453 ಮನೆ–ಮನೆ ಭೇಟಿ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಇದಲ್ಲದೆ, 97 ಟ್ರಾನ್ಸಿಟ್ ತಂಡಗಳು ಹಾಗೂ 132 ಸಂಚಾರಿ ತಂಡಗಳನ್ನು ಒಳಗೊಂಡಂತೆ ಒಟ್ಟು 1,682 ತಂಡಗಳನ್ನು ರಚಿಸಲಾಗಿದೆ. 333 ಮೇಲ್ವಿಚಾರಕರು ಮತ್ತು 3,364 ಸಿಬ್ಬಂದಿ ಅಭಿಯಾನದಲ್ಲಿ ಸೇವೆ ಸಲ್ಲಿಸಲಿದ್ದು, ಜಿಲ್ಲೆಯಾದ್ಯಂತ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ, ಉಪ ನಿರ್ದೇಶಕ ಡಾ. ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ, ಉತ್ತರ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಪರ ನಿರ್ದೇಶಕ (ಪ್ರಭಾರ) ಡಾ. ಪುಪ್ಪಾ ಎಚ್.ಆರ್., ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಕೇಶ್ ಕಾಂಬಳೆ, ವಿಶ್ವ ಆರೋಗ್ಯ ಸಂಸ್ಥೆಯ ಪೋಲಿಯೊ ಸರ್ವೇಕ್ಷಣಾಧಿಕಾರಿ ಡಾ. ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ್ ನರಿಬೋಳ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಭಾಲ್ಕೆ, ಪ್ರಾಂಶುಪಾಲ ಡಾ. ರವಿಕಾಂತಿ ಕ್ಯಾತನಾಳ, ಶಿವಾಜಿನಗರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಥೆಶಾಮ್, ಸಿಡಿಪಿಒ ಅಂಬಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ್ ಜಾವಳಗೇರಿ, ಜಿಲ್ಲಾ ನಗರ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ನಗರ ಕಾರ್ಯಕ್ರಮ ಸಂಯೋಜಕ ರವೀಂದ್ರ ಠಾಕೂರ್, ಅಶೋಕ್ ನೀಲೂರ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೋಮು ರಾಠೋಡ್ ನಿರೂಪಿಸಿದರು. ಡಾ. ಸಿದ್ದು ಪಾಟೀಲ ಸ್ವಾಗತಿಸಿ, ಶಶಿಧರ್ ಬಳೆ ವಂದಿಸಿದರು.



