“ಮಾದಕ ವಸ್ತುಗಳ ವಿರುದ್ಧ ಸಮರಕ್ಕೆ ಕೈಜೋಡಿಸಿ: ಪೊಲೀಸ್ ಕಮೀಶನರ್ ಶರಣಪ್ಪ ಕರೆ

ಕಲಬುರಗಿ; ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ವಿರುದ್ಧ ಸಮೂಹ ಹೋರಾಟ ಅಗತ್ಯವಾಗಿದ್ದು, ಯುವಜನರು ಈ ದುಶ್ಚಟದಿಂದ ದೂರವಿರುವುದಷ್ಟೇ ಅಲ್ಲ, ಸುತ್ತಮುತ್ತ ಇಂತಹ ಚಟುವಟಿಕೆಗಳು ಕಂಡುಬAದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಕರೆ ನೀಡಿದರು.
ಅಂತರರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕಲಬುರಗಿ ನಗರ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಸಂಜೆ ನಗರದ ಎಸ್ವಿಪಿ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತು ಸರಬರಾಜು ಮಾಡುವವರ ವಿರುದ್ಧ ಮಾತ್ರವಲ್ಲದೆ, ಅವುಗಳನ್ನು ಸೇವಿಸುವವರ ಮೇಲೂ ಎನ್ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು ೨೦೨೫ರ ಜನವರಿಯಿಂದ ಇದುವರೆಗೆ ಕಲಬುರಗಿ ನಗರದಲ್ಲಿ ಮಾದಕ ವಸ್ತು ಸೇವಕರು ಮತ್ತು ಪೆಡ್ಲರ್ಗಳ ವಿರುದ್ಧ ಸುಮಾರು ೬೦೦ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಮಾದಕ ವ್ಯಸನಕ್ಕೆ ಒಳಗಾದವರು ಮತ್ತು ಮಾದಕ ವಸ್ತು ಜಾಲದಲ್ಲಿ ತೊಡಗಿರುವವರನ್ನು ಗುರುತಿಸಿ ಅವರನ್ನು ಮತ್ತೆ ಸಾಮಾನ್ಯ ಬದುಕಿನತ್ತ ತರಲು ಸನ್ಮಿತ್ರ ಎಂಬ ವಿಶೇಷ ಉಪಕ್ರಮ ಆರಂಭಿಸಲಾಗಿದೆ ಎಂದು ಶರಣಪ್ಪ ಹೇಳಿದರು. ಈ ಯೋಜನೆಯಡಿ ಸಂಬAಧಿತ ವ್ಯಕ್ತಿಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಅವರು ಸಂಪೂರ್ಣವಾಗಿ ಸುಧಾರಿಸುವವರೆಗೆ ನಿಗಾ ವಹಿಸಲಾಗುತ್ತಿದೆ. ಈ ಮೂಲಕ ಈಗಾಗಲೇ ಮಾದಕ ಜಾಲಕ್ಕೆ ಸಿಲುಕಿದ್ದ ೧೫೦ಕ್ಕೂ ಹೆಚ್ಚು ಯುವಕರಲ್ಲಿ ಬದಲಾವಣೆಯ ಲಕ್ಷಣಗಳು ಕಂಡುಬAದಿವೆ ಎಂದು ಅವರು ಹೇಳಿದರು.
೧೮ರಿಂದ ೨೫ ವರ್ಷದ ವಯಸ್ಸು ಜೀವನ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಯುವಕರು ತಮ್ಮ ಗುರಿ ಮತ್ತು ಭವಿಷ್ಯದ ಕಡೆ ಗಮನಹರಿಸಬೇಕು, ಕೆಟ್ಟ ಚಟಗಳಿಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು.



