ವಿದ್ಯಾರ್ಥಿನಿಯರಿಂದ ಕಾಲೇಜು ಕಟ್ಟಡಕ್ಕೆ ಸುಣ್ಣಬಣ್ಣ ಬಳಕೆ: ಪ್ರಾಂಶುಪಾಲರು, ಶಿಕ್ಷಕರ ವಿರುದ್ಧ ಪ್ರತಿಭಟನೆ

ಕಲಬುರಗಿ, ನ.16: ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಂದ ಸಿ.ಟಿ.ಸಿ. ಶಿಬಿರದ ಹೆಸರಿನಲ್ಲಿ ಕಾಲೇಜು ಕಟ್ಟಡದ ಗೋಡೆಗಳಿಗೆ ಸುಣ್ಣಬಣ್ಣ ಬಳಿಸುವುದು, ಕಬ್ಬಿಣದ ಗ್ರಿಲ್ಗಳಿಗೆ ಬಣ್ಣ ಹಚ್ಚಿಸುವುದು ಹಾಗೂ ಕಟ್ಟಡದ ಅಂದಗೊಳಿಸುವ ಕೆಲಸ ಮಾಡಿಸಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಲಿಂಗ ಹಳಿಮನಿ ಅವರ ನೇತೃತ್ವದಲ್ಲಿ, ಇವಾನ್ ಶಾಹಿ ಹಿಂಭಾಗದಲ್ಲಿರುವ ಸಿ.ಟಿ.ಸಿ. ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿನಿಯರಿಂದ ಇಂತಹ ಕೆಲಸ ಮಾಡಿಸಿರುವ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿ.ಇಡಿ. ಪದವಿ ಪಡೆಯುತ್ತಿರುವ ವಿದ್ಯಾರ್ಥಿ-ಶಿಕ್ಷಕರಿಗೆ ಕಡ್ಡಾಯವಾಗಿ ಪ್ರಾಯೋಗಿಕ ಹಾಗೂ ವಸತಿ ಅಥವಾ ಅರೆವಸತಿ ಮಾದರಿಯಲ್ಲಿ ಸಿ.ಟಿ.ಸಿ. ಶಿಬಿರ (ಪೌರತ್ವ ತರಬೇತಿ ಶಿಬಿರ) ಆಯೋಜಿಸಲಾಗುತ್ತದೆ. ಈ ಶಿಬಿರದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ, ತಂಡದ ಕಾರ್ಯನಿರ್ವಹಣೆ ಹಾಗೂ ಸಮುದಾಯ ಜೀವನದ ಅರಿವು ಮೂಡಿಸುವುದಾಗಿದೆ. ಆದರೆ ಈ ಉದ್ದೇಶಗಳಿಗೆ ವಿರುದ್ಧವಾಗಿ ವಿದ್ಯಾರ್ಥಿನಿಯರನ್ನು ಕಾಲೇಜು ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿಯುವ ಮತ್ತು ಗ್ರಿಲ್ಗಳಿಗೆ ಬಣ್ಣ ಹಚ್ಚುವ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ವೇದಿಕೆಯ ಕಾರ್ಯಕರ್ತರು ಆರೋಪಿಸಿದರು.
ನಗರ ವ್ಯಾಪ್ತಿಯಲ್ಲಿ ಇಂತಹ ಶಿಬಿರ ಆಯೋಜಿಸಲು ಅವಕಾಶವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಶಿಬಿರ ನಡೆಸಲು ನಿಯಮಾವಳಿಗಳಲ್ಲಿ ಅವಕಾಶವಿದೆ. ಆದರೂ ಕಾಲೇಜಿನ ಪ್ರಾಂಶುಪಾಲರು ನಿಯಮಗಳನ್ನು ಉಲ್ಲಂಘಿಸಿ ಶಿಬಿರ ಆಯೋಜಿಸಿದ್ದಾರೆ. ಶಿಬಿರದ ಹೆಸರಿನಲ್ಲಿ ಕಾಲೇಜು ಕಟ್ಟಡದ ಅಂದಗೊಳಿಸುವ ಕಾಮಗಾರಿ ಮಾಡಿಸಿರುವುದು ಕಾನೂನುಬಾಹಿರ ಎಂದು ಪ್ರತಿಭಟನಾಕಾರರು ದೂರಿದರು.
ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರವನ್ನೂ ಧರಿಸದೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಕ್ಕೆ ಬಣ್ಣ ಬಳಿಯುತ್ತಿರುವುದನ್ನು ಗಮನಿಸಿ ಈ ಕುರಿತು ವಿಚಾರಿಸಲು ಹೋದಾಗ, ಪ್ರಾಂಶುಪಾಲರು ಹಾಗೂ ಶಿಕ್ಷಕರು ವಿದ್ಯಾರ್ಥಿನಿಯರನ್ನು ಮುಂದೆ ಮಾಡಿ ಪ್ರತಿಭಟನಾಕಾರರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಬಳಿಕ ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಕರೆದುಕೊಂಡು ಹೋಗಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರೀಕರಣ ಮಾಡಿದ್ದಕ್ಕಾಗಿ ತಮ್ಮನ್ನು ಕಾಲೇಜಿನ ಪ್ರವೇಶದ್ವಾರಕ್ಕೆ ಬೀಗ ಹಾಕಿ ಮುಷ್ಕರ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶಿಬಿರ ಆಯೋಜಿಸಲು ಪಡೆದಿರುವ ಅನುಮತಿ ಪತ್ರವನ್ನು ತೋರಿಸುವಂತೆ ಕೇಳಿದಾಗ, ಯಾವುದೇ ಅನುಮತಿ ಪಡೆದಿಲ್ಲ ಎಂದು ಕಾಲೇಜಿನವರು ತಿಳಿಸಿದ್ದಾರೆ. ಸುಮಾರು 60 ವರ್ಷಗಳಷ್ಟು ಹಳೆಯದಾದ ಕಟ್ಟಡವನ್ನು ಸ್ವಯಂಪ್ರೇರಿತವಾಗಿ ಅಂದಗೊಳಿಸುತ್ತಿದ್ದೇವೆ. ಕಟ್ಟಡದ ಸುಂದರೀಕರಣಕ್ಕಾಗಿ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಅನುದಾನ ದೊರೆತಿಲ್ಲ. ಕಾಲೇಜಿಗೆ ದಾನಿಗಳು ಬಣ್ಣದ ಡಬ್ಬಿಗಳನ್ನು ನೀಡಿರುವುದರಿಂದ ವಿದ್ಯಾರ್ಥಿಗಳೇ ಬಣ್ಣ ಬಳಿಯುತ್ತಿದ್ದಾರೆ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಸಮರ್ಥಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಆದರೆ, ಹಳೆಯ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗಳಿಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕೈಗಳಿಗೆ ಅಥವಾ ತಲೆಗೆ ರಕ್ಷಣಾ ಸಾಮಗ್ರಿಗಳನ್ನೂ ಒದಗಿಸಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರಿಗೆ ಏನಾದರೂ ಅಪಾಯ ಸಂಭವಿಸಿದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ವೇದಿಕೆಯ ಕಾರ್ಯಕರ್ತರು ಪ್ರಶ್ನಿಸಿದರು. ಶೈಕ್ಷಣಿಕ ಚಟುವಟಿಕೆಗಳ ಭಾಗವಲ್ಲದ ಕಟ್ಟಡದ ಸುಂದರೀಕರಣ ಕೆಲಸಕ್ಕೆ ವಿದ್ಯಾರ್ಥಿನಿಯರನ್ನು ಬಳಸಿಕೊಂಡಿರುವುದು ಖಂಡನೀಯ ಎಂದರು.
ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳನ್ನು ಭೇಟಿಯಾಗಿ ವಿಷಯ ತಿಳಿಸಿದಾಗ, ಇದು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಪಡೆಯಬೇಕಾದ ವಿದ್ಯಾರ್ಥಿನಿಯರನ್ನು ಕಾಲೇಜು ಕಟ್ಟಡಕ್ಕೆ ಬಣ್ಣ ಬಳಿಯುವ ಕೆಲಸಕ್ಕೆ ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ತಪ್ಪಿತಸ್ಥ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಅಮಾನತುಗೊಳಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸದಿದ್ದರೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂದೀಪ್ ಭರಣಿ, ಸತೀಶ್ ಕಡುಣ್, ವಿಶ್ವನಾಥ್ ಡೇಕೂನ್, ಪಪ್ಪು ಕಾಳೆ, ಶರಣು ಸೇರಿದಂತೆ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.



