ಜಿಲ್ಲಾಸುದ್ದಿ

ಶಾಸನದಲ್ಲಿ ಏಕ ರೂಪದ ಕಬ್ಬಿನ ದರ ನೀಡಲು ಸಾಧ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ, ನ.14: ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ನೀಡುವ ಕಬ್ಬಿನ ದರವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ನೀಡಲು ಸಾಧ್ಯವಿಲ್ಲ. ಏಕೆಂದರೆ ಎರಡೂ ಭಾಗಗಳಲ್ಲಿನ ಕಬ್ಬಿನ ಇಳುವರಿ ವಿಭಿನ್ನವಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನೀಡುವ ಕಬ್ಬಿನ ದರವನ್ನು ನಮ್ಮ ಭಾಗದಲ್ಲಿ ಎಂದಿಗೂ ನೀಡಿಲ್ಲ. ಅಲ್ಲಿನ ಕಬ್ಬಿನ ಇಳುವರಿಯೇ ಬೇರೆ, ನಮ್ಮ ಭಾಗದ ಇಳುವರಿಯೇ ಬೇರೆ. ರಾಜ್ಯ ಸರ್ಕಾರ ತನ್ನ ಕಡೆಯಿಂದ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಇನ್ನು ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.

ರೈತರು ಯಾರ ಪ್ರಚೋದನೆಗೂ ಒಳಗಾಗಬಾರದು. ರೈತರು ಒಂದು ಹೆಜ್ಜೆ ಮುಂದೆ ಬಂದರೆ ಸರ್ಕಾರವೂ ಒಂದು ಹೆಜ್ಜೆ ಮುಂದೆ ಬರಲಿದೆ ಎಂದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈಗ ಏನು ಮಾಡುತ್ತಿದೆ? ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ವಿಚಾರವಾಗಿ ಮಾತನಾಡಿದ್ದಾರೆಯೇ? ರಾಜ್ಯದ ತೆರಿಗೆ ಹಣವನ್ನು ಪಡೆದುಕೊಂಡು ಲಕ್ಷದೀಪೋತ್ಸವ ಆಚರಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಬೆಂಗಳೂರು ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚಿನ ಅನುದಾನ ನೀಡಿದೆ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ರಾಜ್ಯ ಸರ್ಕಾರದ ಹಣಕಾಸಿನ ಕೊರತೆ (ವಿತ್ತೀಯ ಕೊರತೆ) ಆಧರಿಸಿ ಸಾಲ ಪಡೆಯಲಾಗಿದೆ. ಸಾಲವನ್ನು ಮರುಪಾವತಿ ಮಾಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆಗಿದೆ. ಬಿಎಂಆರ್‌ಸಿಎಲ್‌ನಲ್ಲಿಯೂ ರಾಜ್ಯ ಸರ್ಕಾರ ಪಾಲುದಾರ ಸಂಸ್ಥೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಕೆಲವು ಲೋಪಗಳಾಗಿವೆ ಎಂದು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡರು. ಈ ಪಟ್ಟಿ ಒಂದೂವರೆ ವರ್ಷದ ಹಿಂದೆಯೇ ಸಿದ್ಧವಾಗಿತ್ತು. ಶಾಸಕರಿಗೆ ಹೆಚ್ಚಿನ ಆಯ್ಕೆಯ ಅವಕಾಶ ನೀಡಲಾಗಿತ್ತು. ಕೆಲವು ಕಡೆ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂಬ ಆರೋಪಗಳಿವೆ. ಆದರೆ, ಅವರು ಈಗಾಗಲೇ ಆರ್‌ಎಸ್‌ಎಸ್ ತೊರೆದು ಬಂದಿರಬಹುದು ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಬೋಗಸ್ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದ ಖರ್ಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗವೇ ತೀರ್ಮಾನ ಕೈಗೊಳ್ಳಲಿದೆ ಎಂದರು.

ಉತ್ತರ ಪ್ರದೇಶದಲ್ಲಿ ಎಸ್‌ಐಆರ್ ವಿಚಾರವಾಗಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅಲ್ಲಿ ಒಂದೂವರೆ ಕೋಟಿ ಹಿಂದೂಗಳ ಮತಗಳನ್ನು ಅಳಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಇದೀಗ ಚುನಾವಣಾ ಆಯೋಗ ಅತಿಯಾಗಿ ಸಕ್ರಿಯವಾಗಿದೆ. ಈ ಕುರಿತು ಅಲ್ಲಿನ ದಾಖಲೆಗಳನ್ನು ಇನ್ನೆರಡು-ಮೂರು ದಿನಗಳಲ್ಲಿ ನೀಡುತ್ತೇನೆ ಎಂದು ತಿಳಿಸಿದರು.

ಅಧಿವೇಶನದ ಬಳಿಕ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂಬ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಮೊದಲು ಈ ಬಾರಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನೋಡೋಣ ಎಂದು ತಿರುಗೇಟು ನೀಡಿದರು.

ಶ್ರೀರಾಮುಲು ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಕಿವಿಯಲ್ಲಿ ಹೇಳಿದ್ದಾರೆಯೇ ಅಥವಾ ಅಮಿತ್ ಶಾ ಬಂದು ಹೇಳಿದ್ದಾರೆಯೇ ಎಂಬುದನ್ನು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ್ ದೇಶಮುಖ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್, ಹಿರಿಯ ಮುಖಂಡ ಶಿವಾನಂದ ಪಾಟೀಲ್ ಮರತೂರ ಹಾಗೂ ಶರಣ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button