ಸಿಯುಕೆ ಕೇಂದ್ರ ಗ್ರಂಥಾಲಯದಲ್ಲಿ ನವೆಂಬರ್ 16ರಿಂದ ಮೂರು ದಿನಗಳ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

ಕಲಬುರಗಿ, ನ. 11: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕೇಂದ್ರ ಗ್ರಂಥಾಲಯವು ಓದುವ ಹವ್ಯಾಸ ಬೆಳೆಸುವುದು ಹಾಗೂ ಗ್ರಂಥಾಲಯದ ಸಂಪನ್ಮೂಲಗಳು ಮತ್ತು ಸೇವೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 16ರಿಂದ 18ರವರೆಗೆ ಮೂರು ದಿನಗಳ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಿದೆ.
ಈ ಅಂಗವಾಗಿ ವಿವಿಧ ಸ್ಪರ್ಧೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಅವು ಕೇಂದ್ರ ಗ್ರಂಥಾಲಯದ ಡಾ. ಎಸ್.ಆರ್. ರಂಗನಾಥನ್ ಸಭಾಂಗಣದಲ್ಲಿ ನಡೆಯಲಿವೆ. ಕಾರ್ಯಕ್ರಮದ ಅಂಗವಾಗಿ ಸಿದ್ಧಪಡಿಸಲಾದ ಭಿತ್ತಿಪತ್ರವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹಾಗೂ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರು ಜಂಟಿಯಾಗಿ ಬಿಡುಗಡೆ ಮಾಡಿದರು.
ಓದುವ ಸಂಸ್ಕೃತಿ, ಶಿಕ್ಷಣ, ಸಂಶೋಧನೆ, ಜ್ಞಾನ ಪ್ರಸಾರ ಹಾಗೂ ನಿರಂತರ ಕಲಿಕೆಯನ್ನು ಉತ್ತೇಜಿಸುವಲ್ಲಿ ಗ್ರಂಥಾಲಯಗಳ ಮಹತ್ವದ ಪಾತ್ರವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ದೇಶಾದ್ಯಂತ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತದೆ. ಗ್ರಂಥಾಲಯಗಳಲ್ಲಿ ಲಭ್ಯವಿರುವ ವಿವಿಧ ಸಂಪನ್ಮೂಲಗಳು ಮತ್ತು ಸೇವೆಗಳ ಕುರಿತು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಈ ವರ್ಷದ ಆಚರಣೆಯ ಅಂಗವಾಗಿ ಕೇಂದ್ರ ಗ್ರಂಥಾಲಯವು ಮೂರು ಪ್ರಮುಖ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನವೆಂಬರ್ 16ರಂದು ಪದವಿ, ಸ್ನಾತಕೋತ್ತರ ಹಾಗೂ ಪಿಎಚ್.ಡಿ. ವಿದ್ಯಾರ್ಥಿಗಳಿಗಾಗಿ ‘ಲೈಬ್ರರಿ ಇನ್ಸ್ಟಾಗ್ರಾಂ ರೀಲ್ಸ್’ ಸ್ಪರ್ಧೆ ಆಯೋಜಿಸಲಾಗಿದೆ. ನವೆಂಬರ್ 17ರಂದು ‘ಪಿಕ್ ಆ್ಯಂಡ್ ಟಾಕ್’ ಹಾಗೂ ನವೆಂಬರ್ 18ರಂದು ‘ಲೈಬ್ರರಿ ಟ್ರೆಷರ್ ಹಂಟ್’ ಸ್ಪರ್ಧೆಗಳು ನಡೆಯಲಿವೆ. ಈ ಎರಡೂ ಸ್ಪರ್ಧೆಗಳಲ್ಲಿ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಬಹುದಾಗಿದೆ.
ಈ ಚಟುವಟಿಕೆಗಳು ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಗ್ರಂಥಾಲಯದ ಸಂಪನ್ಮೂಲಗಳು ಮತ್ತು ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರೋತ್ಸಾಹಿಸಲಿವೆ. ಶೈಕ್ಷಣಿಕ ಹಾಗೂ ಸಂಶೋಧನಾ ಉತ್ಕೃಷ್ಟತೆಯನ್ನು ಉತ್ತೇಜಿಸುವಲ್ಲಿ ಗ್ರಂಥಾಲಯಗಳ ಮಹತ್ವದ ಪಾತ್ರದ ಕುರಿತು ಅರಿವು ಮೂಡಿಸುವ ಗುರಿಯನ್ನೂ ಹೊಂದಿವೆ.
ಮೂರು ದಿನಗಳ ಕಾರ್ಯಕ್ರಮಗಳು ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿಗೆ ಗ್ರಂಥಾಲಯದ ಸಂಪನ್ಮೂಲಗಳನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ಉತ್ತಮ ವೇದಿಕೆಯಾಗಲಿವೆ. ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಓದುವ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ, ಕಾನೂನು ಅಧ್ಯಯನ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಹೂಗಾರ, ಸಹಾಯಕ ಗ್ರಂಥಪಾಲಕ ಡಾ. ಜಿ.ಜೆ.ಪಿ. ದೀಕ್ಷಿತ್, ವೃತ್ತಿಪರ ಸಹಾಯಕ ರಾಜಕುಮಾರ ಕಲ್ಯಾಣಿ, ರಾಜೇಶ್ ಸಿ. ದಾಸ್ ಹಾಗೂ ಗ್ರಂಥಾಲಯದ ಸಿಬ್ಬಂದಿಗಳಾದ ಬಸವರಾಜ ಯಾದವಾಡ, ನಿಂಗಣ್ಣ ಎಂ.ಜಿ., ಪ್ರಕಾಶ್ ಎಸ್.ಎನ್., ಸಾಗರ ಕಬಾಡೆ, ಸತೀಶ್ ಕುಮಾರ್ ಮತ್ತು ಶಿವಕುಮಾರ್ ಜಿ. ಉಪಸ್ಥಿತರಿದ್ದರು.
