ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ ಬಾಲಕ ಸಾವು

ಸೇಡಂ, ನ.9: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ 12 ವರ್ಷದ ಬಾಲಕನೊಬ್ಬ ಪಟಾಕಿ ಎಂದು ಭಾವಿಸಿ ಹೊಲದಲ್ಲಿ ಇಡಲಾಗಿದ್ದ ಅಪಾಯಕಾರಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹಂದರಕಿ ಗ್ರಾಮದ ಭೀಮರಾಯ ಹಣಮಂತ ಬುಡಿಲೇರ (12) ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಬಾಲಕನಿಗೆ ಮನೆಯ ಮುಂಭಾಗದಲ್ಲಿ ಸಿಡಿಮದ್ದು ಸಿಕ್ಕಿದೆ. ಅದನ್ನು ಸಾಮಾನ್ಯ ಪಟಾಕಿ ಎಂದು ಭಾವಿಸಿದ ಬಾಲಕ ಕುತೂಹಲದಿಂದ ಬೆಂಕಿ ಹಚ್ಚಿದ್ದಾನೆ. ಆದರೆ, ಕಾಡುಹಂದಿಗಳಿಂದ ಬೆಳೆ ರಕ್ಷಿಸಲು ಹೊಲಗಳಲ್ಲಿ ಇರಿಸಲಾಗುವ ಈ ಸಿಡಿಮದ್ದು ಅತ್ಯಂತ ತೀವ್ರವಾಗಿ ಸ್ಫೋಟಗೊಳ್ಳುವ ಸ್ವರೂಪದ್ದಾಗಿತ್ತು ಎನ್ನಲಾಗಿದೆ.
ಬಾಲಕ ಬೆಂಕಿ ಹಚ್ಚಿದ ಕೆಲವೇ ಕ್ಷಣಗಳಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಬಾಲಕನ ತಲೆ ಸಂಪೂರ್ಣ ಛಿದ್ರಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಕಣ್ಣೆದುರೇ ಮಗನ ದೇಹ ಛಿದ್ರಗೊಂಡು ಬಿದ್ದಿರುವುದನ್ನು ಕಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದ ಸಂಭ್ರಮದಲ್ಲಿದ್ದ ಹಂದರಕಿ ಗ್ರಾಮದಲ್ಲಿ ಬಾಲಕನ ಸಾವಿನಿಂದ ಶೋಕದ ವಾತಾವರಣ ನಿರ್ಮಾಣವಾಗಿದೆ.
ಹೊಲಗಳಲ್ಲಿ ಕಾಡುಹಂದಿಗಳಿಂದ ಬೆಳೆ ರಕ್ಷಿಸುವ ಉದ್ದೇಶದಿಂದ ಇಂತಹ ಅಪಾಯಕಾರಿ ಸಿಡಿಮದ್ದುಗಳನ್ನು ಅಳವಡಿಸುವುದು ಹಾಗೂ ಅವುಗಳನ್ನು ಅಸುರಕ್ಷಿತವಾಗಿ ಇಡುವುದರಿಂದ ಅಮಾಯಕ ಜೀವಗಳು ಬಲಿಯಾಗುವ ಅಪಾಯವಿದೆ. ಇಂತಹ ಅಪಾಯಕಾರಿ ಸಿಡಿಮದ್ದು ಮತ್ತು ಅಕ್ರಮ ಸ್ಫೋಟಕಗಳನ್ನು ಬಳಸುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
