ಜಿಲ್ಲಾಸುದ್ದಿ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಬಸವರಾಜ ಕೊನೆಕ್ ಆಯ್ಕೆ

ನ.15ರಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ; ಪ್ರಕಾಶಕ ಡಾ. ಬಸವರಾಜ ಕೊನೆಕ್ ಅವರಿಗೆ ಪರಿಷತ್ತಿನಿಂದ ಅಧಿಕೃತ ಆಹ್ವಾನ

ಕಲಬುರಗಿ, ನ.9: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಆವರಣದಲ್ಲಿ ನವೆಂಬರ್ 15ರಂದು ನಡೆಯಲಿರುವ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕ ಹಾಗೂ ಪುಸ್ತಕೋದ್ಯಮಿ ಡಾ. ಬಸವರಾಜ ಕೊನೆಕ್ ಅವರನ್ನು ಪರಿಷತ್ತಿನ ವತಿಯಿಂದ ಅಧಿಕೃತವಾಗಿ ಆಹ್ವಾನಿಸಿ ಗೌರವಿಸಲಾಯಿತು.

ಪರಿಷತ್ತಿನ ಪದಾಧಿಕಾರಿಗಳು ಡಾ. ಬಸವರಾಜ ಕೊನೆಕ್ ಅವರ ನಿವಾಸಕ್ಕೆ ಭೇಟಿ ನೀಡಿ, ಮೈಸೂರು ಪೇಟ, ಹಾರ ಮತ್ತು ಶಾಲು ಹೊದಿಸಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಅಧಿಕೃತ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ಭಾಷೆ ಮತ್ತು ಪ್ರಕಾಶನ ಲೋಕಕ್ಕೆ ಡಾ. ಬಸವರಾಜ ಕೊನೆಕ್ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಸಾಹಿತ್ಯದಲ್ಲಿನ ಜ್ಞಾನ ಸಂಪತ್ತು ಎಲ್ಲರಿಗೂ ತಲುಪಬೇಕಾದರೆ ಪುಸ್ತಕಗಳ ಪ್ರಕಟಣೆ ಅತ್ಯಂತ ಮುಖ್ಯ. ಇದರಿಂದ ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರ ಸಾಹಿತ್ಯ ಕೃಷಿಗೆ ಅವರು ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳು ಸಮಾಜದಲ್ಲಿ ಸಾಹಿತ್ಯಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಗಳಾಗಿವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಬಸವರಾಜ ಕೊನೆಕ್ ಅವರು ಆಹ್ವಾನ ಸ್ವೀಕರಿಸಿ ಮಾತನಾಡಿ, ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ನೀಡುವುದು ಅತ್ಯಂತ ಮುಖ್ಯ. ಮಾತೃಭಾಷೆಯ ಕಲಿಕೆ ಮತ್ತು ಕನ್ನಡದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 1974ರಲ್ಲಿ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆಯನ್ನು ಆರಂಭಿಸಲಾಯಿತು. ನಂತರ 2002ರಲ್ಲಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಪುಸ್ತಕ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಭಾಗದ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದೆ. ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಕಾಶಕರ ಕೊಡುಗೆ ಮಹತ್ವದ್ದಾಗಿದೆ. ನಾಡು, ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ತೃಪ್ತಿ ತಂದಿದೆ ಎಂದರು.

ಹೊಸ ಆಲೋಚನೆಗಳು ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಪ್ರತಿಭಾವಂತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಪುಸ್ತಕ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಪರಿಷತ್ತಿನ ಈ ಗೌರವಕ್ಕೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ, ಪರಿಷತ್ತಿನ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಪ್ರಮುಖರಾದ ಮುಡುಬಿ ಗುಂಡೇರಾವ್, ಡಾ. ಶ್ರೀಶೈಲ ನಾಗರಾಳ, ಡಾ. ಸಿ.ಸಿ. ನಿಂಗಣ್ಣ, ಡಾ. ಗವಿಸಿದ್ದ ಪಾಟೀಲ, ಡಾ. ಜಯದೇವಿ ಗಾಯಕ್ವಾಡ್, ಅಮೃತಪ್ಪ ಅಣೂರು, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಮಹಾಲಿಂಗಯ್ಯ ಸ್ವಾಮಿ, ಪ್ರಭು ಪಟ್ಟಣಕರ, ಸಂಗಣ್ಣ ಚೋರಗಸ್ತಿ, ಪತ್ರಕರ್ತರಾದ ಪ್ರಭಾಕರ ಜೋಶಿ, ಶೇಷಮೂರ್ತಿ ಅವಧಾನಿ, ಮನೋಜಕುಮಾರ ಗುಡ್ಡಿ, ಡಾ. ಶಿವರಂಜನ ಸತ್ಯಂಪೇಟೆ, ಲಲಿತಾ ಪಾಟೀಲ, ಮಹಾನಂದ ಹುಲಿ, ಭುವನೇಶ್ವರಿ ಹಳ್ಳಿಖೇಡ, ಶಾರದಾ, ಸುನೀತಾ, ರವಿ ಶಹಾಪೂರಕರ, ಹಣಮಂತ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ, ಸಿದ್ಧಲಿಂಗ ಬಾಳಿ, ಈರಣ್ಣ ಸೋನಾರ, ರಾಜಶೇಖರ ಚಿಂಚೋಳಿ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ರೇಣುಕಾ ಎನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button