ಕನ್ನಡವೇ ನಿತ್ಯ ಬದುಕಿನ ನಿತ್ಯೋತ್ಸವ: ಪ್ರೊ. ಸಿ.ಎಸ್. ಆನಂದ್

ಕಲಬುರಗಿ, ನ. 9: ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ದ್ರಾವಿಡ ಭಾಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕನ್ನಡಿಗರಾದ ನಾವು ಕನ್ನಡವನ್ನು ಅನ್ನದ ಭಾಷೆಯಾಗಿ ಹಾಗೂ ಉದ್ಯೋಗದ ಭಾಷೆಯಾಗಿ ಬಳಸುವ ಮೂಲಕ ನಿತ್ಯ ಬದುಕಿನ ನಿತ್ಯೋತ್ಸವವನ್ನಾಗಿಸಬೇಕು ಎಂದು ನಾಡಿನ ಪ್ರಮುಖ ಸಾಹಿತಿ ಪ್ರೊ. ಸಿ.ಎಸ್. ಆನಂದ್ ಹೇಳಿದರು.
ನಗರದ ಸುಖಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಸುಖಿ ಮ್ಯೂಸಿಕಲ್ ಸ್ಟುಡಿಯೋ ವತಿಯಿಂದ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ನಮ್ಮೆಲ್ಲರ ಮನೆ ಮತ್ತು ಮನದ ಭಾಷೆಯಾಗಿದೆ. ಈ ಭಾಷೆಯ ಮೂಲಕ ಶರಣರು, ದಾಸರು, ಸಂತರು, ತತ್ವಪದಕಾರರು ಹಾಗೂ ಜಾನಪದ ಚಿಂತಕರು ಮೌಲ್ಯಯುತ ಸಾಹಿತ್ಯವನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಮಾನವಕುಲದ ಕಲ್ಯಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿಯೂ ನಾಡಿನ ಎಂಟು ಮಂದಿ ಶ್ರೇಷ್ಠ ಸಾಹಿತಿಗಳು ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇಂತಹ ಸಮೃದ್ಧ ಕನ್ನಡಾಂಬೆಯ ಮಕ್ಕಳು ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸುವ ಹಾಗೂ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಲವು ಕಲಾವಿದರು ಕನ್ನಡಪರ ಗೀತೆಗಳನ್ನು ಹಾಡಿ ಗಮನ ಸೆಳೆದರು. ಹಿರಿಯ ಪತ್ರಕರ್ತ ಹಾಗೂ ಹವ್ಯಾಸಿ ಗಾಯಕ ಎಂ. ಸಂಜೀವ್, ಗುಂಡೂರಾವ್ ಕಡಣಿ, ಬಸವಂತರಾಯ ಕೋಳಕೂರ, ಸಿದ್ದು ವಾಘ್ಮೋರೆ, ಸಂಗೀತಾ ವಾಘ್ಮೋರೆ, ಕವಿರಾಜ್ ನಿಂಬಾಳ, ಸಾಗರ ವಾಘ್ಮೋರೆ ಹಾಗೂ ಕವಿರಾಜ್ ಆನಂದ್ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಕಿರಣ್ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
