ಜಿಲ್ಲಾಸುದ್ದಿ

ಕೂಲಿ ಹಣಕ್ಕಾಗಿ ಹಾಗರಗಾ ಗ್ರಾಮಗಳ ಕಾರ್ಮಿಕರ ಪ್ರತಿಭಟನೆ

ಕಲಬುರಗಿ, ಅ.2- ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗರಗಾ, ಆಜಾದಪುರ ಹಾಗೂ ಖಾಜಾ ಕೋಟನೂರ ಗ್ರಾಮಗಳ ಕೂಲಿ ಕಾರ್ಮಿಕರು ಕೂಲಿ ಹಣ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಉದ್ಯೋಗ ಖಾತರಿ ಹಾಗೂ ವಿವಿಧ ಕಾಮಗಾರಿಗಳಡಿ ಸುಮಾರು ಒಂಬತ್ತು ವಾರಗಳಿಂದ ಕೂಲಿ ಕೆಲಸ ಮಾಡಿದ್ದು, ತಾವು ನಿರ್ವಹಿಸಿದ ಕೆಲಸಕ್ಕೆ ಸಂಬಂಧಿಸಿದ ಕೂಲಿ ಹಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.

ಕೂಲಿ ಹಣ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಾರಣಗಳನ್ನು ಹೇಳಿ ಹಣ ಪಾವತಿಸುವುದನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಬಡ ಕಾರ್ಮಿಕರಾಗಿದ್ದು, ಕೂಲಿ ಕೆಲಸವನ್ನೇ ಅವಲಂಬಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಸದ್ಯ ಮಳೆ ಇಲ್ಲದಿರುವುದರಿಂದ ಕೂಲಿ ಕೆಲಸವೂ ಲಭ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈಗಾಗಲೇ ಕೆಲಸ ಮಾಡಿರುವ ಕೂಲಿ ಹಣ ಪಾವತಿಯಾಗದಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸುಮಾರು ಒಂಬತ್ತು ವಾರಗಳಿಂದ ಉದ್ಯೋಗ ಖಾತರಿ ಹಾಗೂ ವಿವಿಧ ಕಾಮಗಾರಿಗಳಡಿ ಕೆಲಸ ಮಾಡಿರುವ ಕೂಲಿ ಹಣವನ್ನು ಶೀಘ್ರ ಪಾವತಿಸಿ, ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

ಒಂದು ವಾರದೊಳಗಾಗಿ ಬಾಕಿ ಇರುವ ಕೂಲಿ ಹಣವನ್ನು ಪಾವತಿಸದಿದ್ದರೆ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕರು ಎಚ್ಚರಿಕೆ ನೀಡಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button