ಜಿಲ್ಲಾಸುದ್ದಿ

ಶರಣ ಹೆಂಡದ ಮಾರಯ್ಯ, ಶರಣೆ ಇಗ್ಗ ಅಕ್ಕಮ್ಮ ಸ್ಮರಣೋತ್ಸವ ನ. 2ರಂದು

ಕಲಬುರಗಿ, ಅ. 10: ಅನುಭವ ಮಂಟಪದಲ್ಲಿ ಶರಣರಾಗಿ ಮೆರೆದ ಅತಿ ಹಿಂದುಳಿದ ಸಮುದಾಯದ ಶರಣ ಹೆಂಡದ ಮಾರಯ್ಯ ಹಾಗೂ ಶರಣೆ ಇಗ್ಗ ಅಕ್ಕಮ್ಮ ಅವರ ಸ್ಮರಣೋತ್ಸವ ಮತ್ತು ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನವೆಂಬರ್ 2ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಠಾಧೀಶ ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪದಲ್ಲಿದ್ದ 770 ಅಮರಗಣಗಳಲ್ಲಿ ಶರಣೆ ಇಗ್ಗ ಅಕ್ಕಮ್ಮ ಅವರು 154 ವಚನಗಳನ್ನು ಹಾಗೂ ಶರಣ ಹೆಂಡದ ಮಾರಯ್ಯ ಅವರು 12 ವಚನಗಳನ್ನು ರಚಿಸಿದ್ದಾರೆ. ಈ ಇಬ್ಬರು ಶರಣರ ಕೊಡುಗೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ ಹಾಗೂ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ಹೋಟೆಲ್ ಬೃಂದಾವನದ ಗ್ರ್ಯಾಂಡ್ ಬಲದೇವ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾಪು೯ಳದ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಎಚ್.ಆರ್. ಶ್ರೀನಾಥ್, ಶಾಸಕ ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅನುಭವ ಮಂಟಪದ ಪ್ರಮುಖ ಲಿಂಗಾಯತ ಗುರುಗಳು ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

25 ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಮಾಜದಲ್ಲಿ ತೆರೆಮರೆಯಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಶರಣೆ ಇಗ್ಗ ಅಕ್ಕಮ್ಮ ಅವರ ಹೆಸರಿನಲ್ಲಿ 13 ಮಂದಿಗೆ ಹಾಗೂ ಶರಣ ಹೆಂಡದ ಮಾರಯ್ಯ ಅವರ ಹೆಸರಿನಲ್ಲಿ 12 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಸೇರಿದಂತೆ ಹಲವು ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕುರಿತು ಆಯ್ಕೆ ಸಮಿತಿಯ ತಜ್ಞರು ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶರಣೆ ಇಗ್ಗ ಅಕ್ಕಮ್ಮ ಅವರು ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದವರಾಗಿದ್ದು, 154 ವಚನಗಳನ್ನು ರಚಿಸಿದ್ದಾರೆ. ಅವರ ಸಮಾಧಿ ಸ್ಥಳ ಶಿವಮೊಗ್ಗ ಜಿಲ್ಲೆಯ ಕೋಟೆಗಾನಹಳ್ಳಿಯಲ್ಲಿದ್ದು, ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿದೆ. ಅವರ ಜೀವನ ಸಾಧನೆ ಕುರಿತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಹಾಗೂ ಶರಣ ಹೆಂಡದ ಮಾರಯ್ಯ ಅವರ ಕುರಿತು ಚಿಂತಕ ಬಿ.ಎಂ. ರಾವೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಇಗ್ಗ ಸಮುದಾಯದ ಅಭಿವೃದ್ಧಿಗೆ ಒತ್ತು

ನವೆಂಬರ್ 2ರಂದು ಬೆಳಿಗ್ಗೆ 10.30ರಿಂದ ಸ್ಮರಣೋತ್ಸವ ಉದ್ಘಾಟನೆ, ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನದ ಬಳಿಕ ಸಮುದಾಯದ ವಿವಿಧ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದ್ದು, ಕಲಬುರಗಿ ಜಿಲ್ಲಾ ರಾಷ್ಟ್ರೀಯ ಇಗ್ಗ ಮಹಾಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭವೂ ಜರುಗಲಿದೆ ಎಂದು ಹೇಳಿದರು.

ಕಳೆದ ಆರು ವರ್ಷಗಳಿಂದ ಹೋರಾಟ ಮತ್ತು ಪ್ರತಿಭಟನೆಗಳ ಮೂಲಕ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗಿದೆ. ಇದೀಗ ನಿಗಮ ರಚನೆಯಾಗಿದ್ದು, ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಸ್ಥಾಪನೆ ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಸಮುದಾಯದ ಸಮಸ್ಯೆಗಳನ್ನು ಹೋರಾಟದ ಜೊತೆಗೆ ಸಂವಾದದ ಮೂಲಕ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು. ನಗರದಲ್ಲಿ ಹಲವು ಸಮುದಾಯಗಳಿಗೆ ಭವನಗಳಿದ್ದರೂ ಇಗ್ಗ ಸಮುದಾಯಕ್ಕೆ ಭವನದ ಕೊರತೆ ಇದೆ. ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು. ಇಗ್ಗ ಸಮುದಾಯದ ಅಭಿವೃದ್ಧಿಯ ಜೊತೆಗೆ ಅತಿ ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳ 32ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಕಾರ್ಯದರ್ಶಿ ವೆಂಕಟೇಶ ಗುಂಡಾನೂರು, ಇಗ್ಗ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಗುತ್ತೇದಾರ್ ಹೊಳಕುಂದ ಹಾಗೂ ರಾಷ್ಟ್ರೀಯ ಇಗ್ಗ ಮಹಾಮಂಡಳದ ಯುವ ಘಟಕದ ಅಧ್ಯಕ್ಷ ಅಖಿಲೇಶ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button