ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಚಿಕ್ಕನಾಗಾಂವಾಡಿ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ

ಬಸವಕಲ್ಯಾಣ, ಅ.1- ತಾಲ್ಲೂಕಿನ ಚಿಕ್ಕನಾಗಾಂವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಯ ವಿದ್ಯಾರ್ಥಿಗಳ ಕೈಬರಹದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಪ್ರಾಯೋಗಿಕವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲಾಗುತ್ತಿದೆ.
‘ಮೆರಿಡಿಯನ್ ಗ್ರೇಡರ್’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್ ಮೂಲಕ 4ರಿಂದ 6ನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಇದರಿಂದ ಬಹುತೇಕ ನಿಖರ ಫಲಿತಾಂಶ ದೊರೆಯುತ್ತಿದ್ದು, ಮೌಲ್ಯಮಾಪನ ಪ್ರಕ್ರಿಯೆ ಸುಲಭವಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಸಿಮಿಯೋನ್ ಹಾಗೂ ಶಿಕ್ಷಕ ರಾಘವೇಂದ್ರ ತಿಳಿಸಿದ್ದಾರೆ.
ಶಾಲೆಯ ಕೋರಿಕೆಯ ಮೇರೆಗೆ ಪ್ರಸ್ತುತ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಜಿಲ್ಲೆಯವರೇ ಆದ ಸಾಫ್ಟ್‌ವೇರ್ ಎಂಜಿನಿಯರ್ ಇಮ್ಯಾನುಯೆಲ್ ಅವರು ತಮ್ಮ ಸಹಪಾಠಿಗಳ ಸಹಕಾರದೊಂದಿಗೆ ‘ಮೆರಿಡಿಯನ್ ಗ್ರೇಡರ್’ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿ ಶಾಲೆಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಆ್ಯಪ್ ಮೂಲಕ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಈ ಹಿಂದೆ ಉತ್ತರ ಪತ್ರಿಕೆಗಳನ್ನು ಸಾಂಪ್ರದಾಯಿಕವಾಗಿ ಪರಿಶೀಲಿಸಲಾಗುತ್ತಿತ್ತು. ಇದೀಗ ಕೃತಕ ಬುದ್ಧಿಮತ್ತೆ ಮೂಲಕ ಮೌಲ್ಯಮಾಪನ ಮಾಡಿದಾಗ ಶೇ 95ರಿಂದ 98ರಷ್ಟು ನಿಖರ ಫಲಿತಾಂಶ ದೊರೆಯುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಈ ಆ್ಯಪ್ ಬಳಕೆಯಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ನಿಷ್ಪಕ್ಷಪಾತತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ, ಶಿಕ್ಷಕರ ಸಮಯ ಉಳಿತಾಯವಾಗಲಿದೆ. ಶಿಕ್ಷಕರು ಯಾವುದೇ ಒತ್ತಡವಿಲ್ಲದೆ ಹೆಚ್ಚು ಪರೀಕ್ಷಾ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಲು ಹೆಚ್ಚಿನ ಸಮಯ ಮೀಸಲಿಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಆ್ಯಪ್ ವಿದ್ಯಾರ್ಥಿಗಳ ಕೈಬರಹದ ಉತ್ತರಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ ಅಂಕಗಳನ್ನು ನೀಡುತ್ತದೆ. ಉತ್ತರ ಸರಿಯಾಗಿದ್ದರೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತದೆ. ತಪ್ಪಾಗಿದ್ದರೆ ತಪ್ಪಿನ ಕಾರಣ ಹಾಗೂ ಅದನ್ನು ಸರಿಪಡಿಸಿಕೊಳ್ಳುವ ಮಾರ್ಗವನ್ನು ಸೂಚಿಸುತ್ತದೆ ಎಂದು ಶಿಕ್ಷಕರು ವಿವರಿಸಿದ್ದಾರೆ.
ಮೌಲ್ಯಮಾಪನ ಪೂರ್ಣಗೊಂಡ ತಕ್ಷಣ ವಿದ್ಯಾರ್ಥಿಯ ಅಂಕಪಟ್ಟಿ ಹಾಗೂ ಸುಧಾರಣಾ ವರದಿಯನ್ನು PDF ರೂಪದಲ್ಲಿ ಪಡೆಯಲು ಸಾಧ್ಯವಾಗುವುದು ಈ ಆ್ಯಪ್‌ನ ಮತ್ತೊಂದು ವಿಶೇಷತೆಯಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಯ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಆಧುನಿಕ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುತ್ತಿರುವುದಕ್ಕೆ ಸಿಆರ್‌ಸಿ ಜಾಕೀರ್ ಹುಸೇನ್, ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ಕಂದಕೂರೆ, ಚಿಕ್ಕನಾಗಾಂವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚೇಂದ್ರ ದೇವಬಾ, ಮುಖ್ಯಶಿಕ್ಷಕ ಸಿಮಿಯೋನ್, ಶಿಕ್ಷಕರಾದ ರಾಘವೇಂದ್ರ, ರಾಹುಲ್, ಅಶ್ವಿನಿ ಹಾಗೂ ಗ್ರಾಮದ ಮುಖಂಡ ಪುಂಡಲೀಕ ಗೋರ್ಮಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



