ಜಿಲ್ಲಾಸುದ್ದಿ

ಎಸ್‌ಐಆರ್‌ ವಿರೋಧಿ ಪ್ರತಿಭಟನಾಕಾರರ ನೈತಿಕತೆ ಪ್ರಶ್ನಿಸಿದ ದೇವೇಂದ್ರ ದೇಸಾಯಿ ಕಲ್ಲೂರು

ಕಲಬುರಗಿ, ಅ. 10: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಮೊದಲು ತಮ್ಮ ರಾಜಕೀಯ ನಿಲುವು ಮತ್ತು ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ನಗರ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯವೋ, ಅನರ್ಹರು ಅಥವಾ ವಿದೇಶಿ ಪ್ರಜೆಗಳು ಕಾನೂನುಬಾಹಿರವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ತಡೆಯುವುದೂ ಅಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ, ಮತದಾನದ ಹಕ್ಕಿನ ರಕ್ಷಣೆ ಹಾಗೂ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆಯನ್ನು ಪರಿಗಣಿಸಬೇಕು. ಪ್ರಕ್ರಿಯೆಯಲ್ಲಿ ನೈಜ ಲೋಪಗಳಿದ್ದರೆ ಸೂಕ್ತ ದಾಖಲೆ ಮತ್ತು ಸಾಕ್ಷ್ಯಾಧಾರಗಳೊಂದಿಗೆ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ಯಾವುದೇ ಪ್ರಕ್ರಿಯೆಯನ್ನು ಪೂರ್ವಾಗ್ರಹದಿಂದ ವಿರೋಧಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿ ‘ಜನತಾ ನ್ಯಾಯಾಲಯ’ ಹೆಸರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಪ್ರತಿಭಟನೆಯ ಉದ್ದೇಶ ನಿಜವಾಗಿಯೂ ಮತದಾರರ ಹಕ್ಕುಗಳ ರಕ್ಷಣೆಯೇ ಅಥವಾ ರಾಜಕೀಯವಾಗಿ ಒಂದು ಪಕ್ಷವನ್ನು ಬೆಂಬಲಿಸುವುದೇ ಎಂಬುದನ್ನು ಪ್ರತಿಭಟನಾಕಾರರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮಾನತೆ, ಪ್ರಜಾಪ್ರಭುತ್ವ ಹಾಗೂ ನಾಗರಿಕರ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದಕ್ಕೆ ತಮ್ಮ ವಿರೋಧವಿಲ್ಲ. ಅಂತಹ ಹೋರಾಟಗಳಿಗೆ ಬೆಂಬಲವೂ ಇದೆ. ಆದರೆ ದೇಶದ ಭದ್ರತೆ, ಕಾನೂನುಬದ್ಧ ಮತದಾನ ವ್ಯವಸ್ಥೆ ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಯ ವಿಚಾರಗಳಲ್ಲಿಯೂ ಸಮಾನ ಬದ್ಧತೆ ತೋರಿಸಬೇಕು. ಒಂದು ಪಕ್ಷದ ಪರವಾಗಿ ಮಾತ್ರ ಧ್ವನಿ ಎತ್ತಿ, ಮತ್ತೊಂದು ಪಕ್ಷದ ವಿಚಾರದಲ್ಲಿ ಮೌನವಾಗಿರುವುದು ಸಾರ್ವಜನಿಕ ಜೀವನದ ನೈತಿಕತೆಗೆ ತಕ್ಕುದಲ್ಲ ಎಂದು ಅವರು ಟೀಕಿಸಿದ್ದಾರೆ.

ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದಾಗ ಒಂದು ನಿಲುವು, ಸೋತಾಗ ಮತ್ತೊಂದು ನಿಲುವು ತಾಳುವುದು ರಾಜಕೀಯ ದ್ವಂದ್ವವನ್ನು ತೋರಿಸುತ್ತದೆ. ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವವರು ಅದಕ್ಕೆ ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಆಯೋಗದ ನಿರ್ಧಾರಗಳಲ್ಲಿ ಲೋಪಗಳಿದ್ದರೆ ಕಾನೂನುಬದ್ಧವಾಗಿ ಪ್ರಶ್ನಿಸಬೇಕು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಕೈಗೊಳ್ಳುವ ಕ್ರಮಗಳನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ಮಾತ್ರ ವಿರೋಧಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ದೇಶದ ಭದ್ರತೆ, ಸಂವಿಧಾನಬದ್ಧ ಹಕ್ಕುಗಳು, ಅರ್ಹ ಮತದಾರರ ಹಿತಾಸಕ್ತಿ ಮತ್ತು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಎಲ್ಲವೂ ಸಮಾನವಾಗಿ ಮುಖ್ಯವಾಗಿವೆ. ಸಮಾನತೆಯ ಹೋರಾಟದ ಜೊತೆಗೆ ದೇಶದ ಹಿತಾಸಕ್ತಿಗೂ ಆದ್ಯತೆ ನೀಡಬೇಕು. ಯಾವುದೇ ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು ಎಂದು ದೇವೇಂದ್ರ ದೇಸಾಯಿ ಕಲ್ಲೂರು ಅಭಿಪ್ರಾಯಪಟ್ಟಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button