ಭವಿಷ್ಯ ರೂಪಿಸಿಕೊಳ್ಳಲು ಸತತ ಪರಿಶ್ರಮ ಅಗತ್ಯ: ನ್ಯಾಯಾಧೀಶ ಶ್ರೀನಿವಾಸ ನವಲೆ

ಕಲಬುರಗಿ, ಅ.7– ಕಾನೂನು ಎಂದರೆ ಕೇವಲ ನ್ಯಾಯಾಲಯ, ವಕೀಲರು ಹಾಗೂ ಪೊಲೀಸ್ ಇಲಾಖೆಗೆ ಸೀಮಿತವಾದ ವಿಷಯವಲ್ಲ. ಕಾನೂನು ನಮ್ಮ ಹಕ್ಕುಗಳನ್ನು ರಕ್ಷಿಸುವ ಶಕ್ತಿಯಾಗಿದ್ದು, ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
ತಾಲ್ಲೂಕಿನ ಉಪಳಾಂವ ಗ್ರಾಮದ ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲಾ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲೆ ಹಾಗೂ ಜೈ ಹಿಂದ್ ಬಿ.ಇಡಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಸುರಕ್ಷಿತವಾಗಿ ಬದುಕುವ ಹಕ್ಕು, ಪ್ರೀತಿ, ಗೌರವ ಹಾಗೂ ಸಮಾನತೆಯಿಂದ ಬೆಳೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಬಡವರಾಗಿರಲಿ, ಶ್ರೀಮಂತರಾಗಿರಲಿ, ಗ್ರಾಮದಲ್ಲಿರಲಿ ಅಥವಾ ನಗರದಲ್ಲಿರಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದರು.
ಯಾರಿಗಾದರೂ ಅನ್ಯಾಯವಾದಾಗ ಅವರಿಗೆ ನೆರವು ನೀಡುವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶಗಳಲ್ಲಿ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ಮತ್ತು ಕಾನೂನು ಅರಿವು ಒದಗಿಸುವುದು ಸೇರಿದೆ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲೂ ದೊಡ್ಡ ಕನಸುಗಳಿರುತ್ತವೆ. ಮುಂದೆ ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ಪೊಲೀಸ್ ಅಧಿಕಾರಿಗಳು ಅಥವಾ ನ್ಯಾಯಾಧೀಶರಾಗುವ ಅವಕಾಶವಿದೆ. ಇಂದಿನ ಪರಿಸ್ಥಿತಿ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಸತತ ಪರಿಶ್ರಮ, ಶಿಕ್ಷಣ ಹಾಗೂ ಆತ್ಮವಿಶ್ವಾಸವೇ ಭವಿಷ್ಯವನ್ನು ರೂಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ವ್ಯಕ್ತಿಗಳಾಗಿ ಬೆಳೆದು ತಮ್ಮ ಕುಟುಂಬ, ಗ್ರಾಮ ಹಾಗೂ ದೇಶಕ್ಕೆ ಹೆಮ್ಮೆ ತರುವಂತಹ ನಾಗರಿಕರಾಗಬೇಕು. ಕಾನೂನಿನ ಅರಿವು, ಹಕ್ಕುಗಳ ಅರಿವು ಮತ್ತು ಜವಾಬ್ದಾರಿಯ ಭಾವನೆ ಬೆಳೆಸಿಕೊಳ್ಳಬೇಕು. ಕಾನೂನು ತಿಳಿದುಕೊಳ್ಳೋಣ, ಹಕ್ಕುಗಳನ್ನು ರಕ್ಷಿಸೋಣ ಹಾಗೂ ಜವಾಬ್ದಾರಿಯುತ ನಾಗರಿಕರಾಗೋಣ ಎಂದು ಕರೆ ನೀಡಿದರು.
ವಕೀಲರ ಸಮಿತಿ ನ್ಯಾಯವಾದಿ ಹಣಮಂತರಾಯ ಅಟ್ಟೂರ ಅವರು ಕಾನೂನು ಅರಿವು ನೆರವನ್ನು ಯಾರು ಹಾಗೂ ಯಾವ ಸಂದರ್ಭಗಳಲ್ಲಿ ಪಡೆಯಬಹುದು ಎಂಬುದರ ಕುರಿತು ವಿವರಿಸಿದರು. ಜಿಲ್ಲಾ ಮಹಿಳಾ ಆರಕ್ಷಕ ನಿರೀಕ್ಷಕಿ ಕುಬೇರ ರಾಯಮಾನೆ ಅವರು ಮಹಿಳಾ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಶಶಿಕಲಾ, ಜೈ ಹಿಂದ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಹಣಮಂತ ಯು. ಕೊಂಡಾ, ವಕೀಲ ಮಲ್ಲಯ್ಯ ಎಸ್. ಸ್ವಾಮಿ, ಉಪನ್ಯಾಸಕಿ ಡಾ. ವಾಣಿ ಸಂಕಗೊಂಡ, ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಪುಂಡಲೀಕ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲಾ ಸಂಸ್ಥಾಪಕ ಗೌಡೇಶ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪಾಟೀಲ, ಶಿಕ್ಷಕ ಕುಪೇಂದ್ರ, ಶಿಕ್ಷಕರು, ಬಿ.ಇಡಿ ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



