ಹಣಕಾಸಿನ ವಿವಾದಕ್ಕೆ ರುಂಡ-ಮುಂಡ ಬೇರ್ಪಡಿಸಿ ಕೊಲೆ: ಇಬ್ಬರು ಆರೋಪಿಗಳ ಬಂಧನ
ಗಾಣಗಾಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; ಹಣಕಾಸಿನ ಬೇಡಿಕೆಯಿಂದ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಅಫಜಲಪುರ, ಸೆ.30: ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿರುವ ಪ್ರಕರಣವನ್ನು ಗಾಣಗಾಪುರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ನಂದಿಕೂರು ತಾಂಡಾದ ಸಂದೀಪ್ ಪವಾರ್ ಹಾಗೂ ಸಂದೀಪ್ ಚವ್ಹಾಣ್ ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಯಾವುದೇ ಸುಳಿವು ನೀಡದೆ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೆ.25ರಂದು ತಾಲೂಕಿನ ಗೋಬ್ಬೂರು (ಬಿ) ಗ್ರಾಮದ ಜಮೀನಿನಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿತ್ತು. ರಾಜ್ಯ ಹೆದ್ದಾರಿ ಸಮೀಪದ ಜಮೀನಿನಲ್ಲಿ ಶವ ಪತ್ತೆಯಾಗಿದ್ದರಿಂದ ಸ್ಥಳಕ್ಕೆ ಧಾವಿಸಿದ ಗಾಣಗಾಪುರ ಪೊಲೀಸರು ಪರಿಶೀಲನೆ ನಡೆಸಿದರು. ಶವವು ಹಲವು ಭಾಗಗಳಲ್ಲಿ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಅಪಘಾತವೋ ಎಂಬ ಅನುಮಾನ ಆರಂಭದಲ್ಲಿ ಮೂಡಿತ್ತು.
ಪೊಲೀಸರು ಗ್ರಾಮದಲ್ಲಿ ಯಾರಾದರೂ ಕಾಣೆಯಾಗಿದ್ದಾರೆಯೇ ಎಂಬ ಕುರಿತು ವಿಚಾರಣೆ ನಡೆಸಿದಾಗ, ಗೋಬ್ಬೂರು ಗ್ರಾಮದ 22 ವರ್ಷದ ಖಲೀಂಸಾಬ್ ಕಾಣೆಯಾಗಿರುವ ಮಾಹಿತಿ ಲಭಿಸಿತು. ಕುಟುಂಬದವರನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ ಪತ್ತೆಯಾಗಿದ್ದ ಶವ ಖಲೀಂಸಾಬ್‌ನದ್ದೇ ಎಂಬುದು ದೃಢಪಟ್ಟಿತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಹಣಕಾಸಿನ ವಿಚಾರವೇ ಕೊಲೆಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ.
ಸೆ.25ರಂದು ಆರೋಪಿಗಳು ತಮೂರಿನಿಂದ ಗಾಣಗಾಪುರಕ್ಕೆ ತೆರಳಿ ವಾಪಸ್ ಬರುತ್ತಿದ್ದಾಗ ಬೈಕ್‌ನ ಪೆಟ್ರೋಲ್ ಖಾಲಿಯಾಗಿತ್ತು. ಈ ವೇಳೆ ಖಲೀಂಸಾಬ್ ಎದುರಾಗಿದ್ದು, ಪೆಟ್ರೋಲ್ ತಂದುಕೊಡುವಂತೆ ಆರೋಪಿಗಳು ಕೇಳಿದ್ದಾರೆ ಎನ್ನಲಾಗಿದೆ. ಪೆಟ್ರೋಲ್ ತಂದುಕೊಟ್ಟ ಬಳಿಕ ಹಣ ನೀಡುವಂತೆ ಖಲೀಂಸಾಬ್ ಕೇಳಿದ್ದು, ಆರೋಪಿಗಳು ₹200 ನೀಡಿದ್ದರು. ಆದರೆ ಆತ ಇನ್ನಷ್ಟು ಹಣ ಕೇಳಿದ್ದರಿಂದ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಜಗಳ ತೀವ್ರಗೊಂಡ ಬಳಿಕ ಆರೋಪಿಗಳು ಖಲೀಂಸಾಬ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಶವವನ್ನು ಗೋಬ್ಬೂರು (ಬಿ) ಗ್ರಾಮದ ತೊಗರಿ ಬೆಳೆದ ಜಮೀನಿನಲ್ಲಿ ಬಿಸಾಡಿ ಪರಾರಿಯಾಗಿದ್ದರು.
ಕೊಲೆ ನಡೆದ ಸ್ಥಳದಲ್ಲಿ ಖಲೀಂಸಾಬ್ ಮೊಬೈಲ್ ಬಳಸದೇ ಇದ್ದುದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಾಗಿತ್ತು. ಆದರೂ ಸ್ಥಳೀಯರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರಂಭದಲ್ಲಿ ಅಪಘಾತವೋ ಅಥವಾ ಕೊಲೆಯೋ ಎಂಬ ಗೊಂದಲ ಮೂಡಿಸಿದ್ದ ಪ್ರಕರಣವು ತನಿಖೆ ಮುಂದುವರಿದಂತೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಕೊಲೆ ಎಂಬುದು ಬಹಿರಂಗವಾಗಿದೆ.
ಪ್ರಕರಣದ ತನಿಖೆಯನ್ನು ಗಾಣಗಾಪುರ ಪೊಲೀಸರು ಮುಂದುವರಿಸಿದ್ದು, ಕೊಲೆಗೆ ಬಳಸಿದ ವಸ್ತುಗಳು ಹಾಗೂ ಇತರ ಸಾಕ್ಷ್ಯಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.



