ಎಡಗೈ ಆಟಗಾರರ ಸಾಧನೆಗೆ ಅದೃಷ್ಟವೂ ಕಾರಣ: ಶರಣರೆಡ್ಡಿ
ಕ್ರಿಕೆಟ್‌ನಲ್ಲಿ ಎಡಗೈ ಆಟಗಾರರು ಎದುರಾಳಿಗಳಿಗೆ ಸಿಂಹಸ್ವಪ್ನ; ಯುವರಾಜ್ ಸಿಂಗ್‌ರಿಂದ ಜಹೀರ್ ಖಾನ್‌ವರೆಗೆ ಹಲವು ದಿಗ್ಗಜರ ಉದಾಹರಣೆ

ಸೇಡಂ, ಸೆ.30: ಮಾನವನ ಜೀವನದಲ್ಲಿ ಅದೃಷ್ಟ ಯಾವಾಗ ಕೈಹಿಡಿಯುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಮಯ ಬಂದಾಗ ಕನಸು ನನಸಾಗುವುದು ಸಹಜ. ಎಡಗೈಯಿಂದ ಬರೆಯುವವರು ಹಾಗೂ ಎಡಗೈಯಿಂದ ಆಡುವವರು ಹೆಚ್ಚಿನ ಬುದ್ಧಿವಂತಿಕೆ ಮತ್ತು ಸಾಧನಾ ಮನೋಭಾವ ಹೊಂದಿರುತ್ತಾರೆ ಎಂಬ ಅಭಿಪ್ರಾಯವೂ ಇದೆ ಎಂದು ಯುವ ಸಾಹಿತಿ ಹಾಗೂ ಶಿಕ್ಷಕ ಶರಣರೆಡ್ಡಿ ಎಸ್. ಕೊಡ್ಲಾ ಹೇಳಿದರು.
ಕ್ರಿಕೆಟ್ ಲೋಕದಲ್ಲಿ ಎಡಗೈ ಆಟಗಾರರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ಭಾರತದ ಪ್ರತಿಭಾವಂತ ಆಟಗಾರ ಯುವರಾಜ್ ಸಿಂಗ್ ಎಡಗೈ ಬ್ಯಾಟಿಂಗ್ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದರು. ಅವರ ಬ್ಯಾಟಿಂಗ್ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿತ್ತು. ಅವರು ಬಾರಿಸಿದ ೧೨ ಎಸೆತಗಳಲ್ಲಿ ಅರ್ಧಶತಕ ಇಂದಿಗೂ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಮರ ಸಾಧನೆಯಾಗಿ ಉಳಿದಿದೆ. ಇದೇ ಪಂದ್ಯದಲ್ಲಿ ಅವರು ಬಾರಿಸಿದ ಆರು ಎಸೆತಗಳಲ್ಲಿನ ಆರು ಸಿಕ್ಸರ್‌ಗಳು ಕೂಡ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದು ಅವರು ವಿವರಿಸಿದರು.
ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್ ಕೂಡ ವಿಶ್ವ ಕ್ರಿಕೆಟ್‌ನಲ್ಲಿ ಎಡಗೈ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಿಯಾನ್ ಲಾರಾ ಅವರ ಏಕ ಇನ್ನಿಂಗ್ಸ್‌ನಲ್ಲಿ ೪೦೦ ರನ್‌ಗಳ ಸಾಧನೆಯೂ ಇಂದಿಗೂ ಯಾರಿಂದಲೂ ಮುರಿಯಲಾಗದ ದಾಖಲೆಗಳಲ್ಲಿ ಒಂದಾಗಿದೆ ಎಂದು ಶರಣರೆಡ್ಡಿ ಹೇಳಿದರು.
ಭಾರತದ ಮತ್ತೊಬ್ಬ ಪ್ರತಿಭಾವಂತ ಎಡಗೈ ಆಟಗಾರ ಸೌರವ್ ಗಂಗೂಲಿ ಕೂಡ ತಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್ ಮೂಲಕ ವಿಶೇಷ ಗುರುತಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಹಲವು ಸ್ಮರಣೀಯ ಪ್ರದರ್ಶನಗಳನ್ನು ನೀಡಲು ಆರಂಭಿಸಿತು. ಸೌರವ್ ಗಂಗೂಲಿ ಅವರ ಎಡಗೈ ಬ್ಯಾಟಿಂಗ್ ಶೈಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು ಎಂದರು.
ಭಾರತದ ಮತ್ತೊಬ್ಬ ಪ್ರಮುಖ ಎಡಗೈ ಬೌಲರ್ ಜಹೀರ್ ಖಾನ್ ಎದುರಾಳಿ ತಂಡಗಳ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರ ನಿಖರ ಹಾಗೂ ವೇಗದ ಬೌಲಿಂಗ್ ಹಲವು ಪ್ರಮುಖ ಪಂದ್ಯಗಳಲ್ಲಿ ಭಾರತಕ್ಕೆ ಯಶಸ್ಸು ತಂದುಕೊಟ್ಟಿತ್ತು.
ಆಸ್ಟ್ರೇಲಿಯಾದ ಎಡಗೈ ಆಟಗಾರರಾದ ಮಿಚೆಲ್ ಜಾನ್ಸನ್ ಮತ್ತು ಮಿಚೆಲ್ ಸ್ಟಾರ್ಕ್ ಕೂಡ ತಮ್ಮ ವೇಗದ ಬೌಲಿಂಗ್ ಮೂಲಕ ವಿಶ್ವದ ಹಲವು ಪ್ರಮುಖ ಬ್ಯಾಟರ್‌ಗಳಿಗೆ ಸವಾಲಾಗಿದ್ದರು. ಇವರಂತೆಯೇ ಅನೇಕ ಎಡಗೈ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆ ಹಾಗೂ ವಿಶಿಷ್ಟ ಆಟದ ಶೈಲಿಯಿಂದ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಹೆಸರನ್ನು ದಾಖಲಿಸಿಕೊಂಡಿದ್ದಾರೆ ಎಂದು ಶರಣರೆಡ್ಡಿ ಎಸ್. ಕೊಡ್ಲಾ ತಿಳಿಸಿದರು.



